ಮೈಸೂರು: ಮನೆ ಬಳಿ ಬಿದ್ದಿದ್ದ ಸಿಡಿಮದ್ದನ್ನು ಅಡಿಕೆ ಎಂದು ತಿಳಿದು ಕಲ್ಲಿನಿಂದ ಜಜ್ಜುತ್ತಿದ್ದ ವೇಳೆ ಸ್ಪೋಟಗೊಂಡು ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಹುಣಸೂರು ತಾಲೂಕು ಗಾವಡಗೆರೆ ಹೋಬಳಿಯ ಹುಲ್ಯಾಳ ಗ್ರಾಮದಲ್ಲಿ ಘಟನೆ ನಡೆದಿದೆ. 54 ವರ್ಷದ ಕಮಲಮ್ಮ ಗಾಯಗೊಂಡವರು. ಮೈಸೂರಿನ ಕೆಆರ್ ಆಸ್ಪತ್ರೆಗೆ ಕಮಲಮ್ಮ ಅವರನ್ನು ದಾಖಲಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಕಮಲಮ್ಮ ಮನೆಯ ಮುಂದೆ ಕುಳಿತಿದ್ದಾಗ ರಸ್ತೆಯಲ್ಲಿ ಬಿದ್ದಿದ್ದ ಕವರ್ ಕಣ್ಣಿಗೆ ಬಿದ್ದಿದೆ. ಅದನ್ನು ತೆಗೆದು ನೋಡಿದಾಗ ಅಡಿಕೆ ಗಾತ್ರದ ವಸ್ತು ಕಂಡು ಬಂದಿದೆ. ಅದನ್ನು ಅಡಿಕೆ ಎಂದು ತಿಳಿದ ಕಮಲಮ್ಮ ಕಲ್ಲಿನಿಂದ ಜಜ್ಜಿದಾಗ ಸ್ಪೋಟಗೊಂಡಿದ್ದು ಮುಖ, ಕೈ ಕಾಲುಗಳಿಗೆ ತೀವ್ರ ಗಾಯಗಳಾಗಿವೆ.
ಸ್ಪೋಟದ ತೀವ್ರತೆಗೆ ಮನೆಯ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ಜೋರಾದ ಶಬ್ದ ಕೇಳಿದ ಸ್ಥಳೀಯರು ತಕ್ಷಣವೇ ಧಾವಿಸಿ ಬಂದು ತೀವ್ರ ಅಸ್ವಸ್ಥರಾಗಿದ್ದ ಕಮಲಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೂಡಲೇ ಅವರನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಡಬಾಂಬ್ ಸ್ಫೋಟಕ ಇದಾಗಿರಬಹುದು ಎಂದು ಶಂಕಿಸಲಾಗಿದೆ.