ಬೆಳಗಾವಿ: ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಹತ್ಯೆಗೈದ ಪತಿ ಮಹಾಶಯ ಬೈಕ್ ಅಪಘಾತದಲ್ಲಿ ಹೆಂಡತಿ ಸಾವನ್ನಪ್ಪಿದ್ದಾಳೆ ಎಂದು ನಾಟಕವಾಡಿದ್ದ. ಈ ಕೃತ್ಯಕ್ಕೆ ಆತನ ತಂದೆ-ತಾಯಿಯೂ ಸಾಥ್ ನೀಡಿದ್ದಾರೆ. ಇದೀಗ ಅಥಣಿ ಪೊಲೀಸರು ಪತಿ, ಅತ್ತೆ-ಮಾವ ಮೂವರನ್ನೂ ಬಂಧಿಸಿದ್ದಾರೆ.
ಅಥಣಿ ತಾಲೂಕಿನ ರೇಣುಕಾ ಸಂತೋಷ್ ಹೋನಕಾಂಡೆ (27) ಕೊಲೆಯಾದ ಮಹಿಳೆ. ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಚಕ್ರಕ್ಕೆ ಸೀರೆ ಸಿಲುಕಿ ಬಿದ್ದು ಸಾವನ್ನಪ್ಪಿದ್ದಾರೆ ಎಂಬಂತೆ ಬಿಂಬಿಸಲಾಗಿತ್ತು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಮಹಿಳೆಯದ್ದು ಕೊಲೆ ಎಂಬುದು ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಸಂತೋಷ್, ಮಾವ ಕಾಮಣ್ಣ ಹಾಗೂ ಅತ್ತೆ ಜಯಶ್ರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರೇಣುಕಾಳನ್ನು ತಾವೇ ಕೊಲೆ ಮಾಡಿ ಕಥೆ ಕಟ್ಟಿದ್ದಾಗಿ ಬಾಯ್ಬಿಟ್ಟಿದ್ದಾರೆ. ಮೂವರನ್ನು ಬಂಧಿಸಿರುವ ಅಥಣಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.