ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ವರದಿಯಾಗಿದೆ. ಇಲ್ಲಿ 22 ವರ್ಷದ ಯುವತಿಯೊಬ್ಬಳನ್ನು ಆಕೆಯ ಲಿವ್-ಇನ್ ಸಂಗಾತಿ ಭೀಕರವಾಗಿ ಕೊಲೆ ಮಾಡಿದ್ದಾನೆ. ತನ್ನ ಪತಿಯಿಂದ ದೂರವಾಗಿ ಮತ್ತೊಬ್ಬ ಯುವಕನೊಂದಿಗೆ ವಾಸಿಸುತ್ತಿದ್ದ ಈ ಯುವತಿಯನ್ನು ಲೈಂಗಿಕ ದಂಧೆಗೆ ತಳ್ಳಲು ಯತ್ನಿಸಿ, ಆಕೆ ನಿರಾಕರಿಸಿದ ಕಾರಣ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ಪುಷ್ಪಾ ಎಂದು ಗುರುತಿಸಲಾದ ಸಂತ್ರಸ್ತೆಯನ್ನು ಆಕೆಯ ಲಿವ್-ಇನ್ ಪಾಲುದಾರ ಶೇಖ್ ಶಮ್ಮಾ ಹಣಕ್ಕಾಗಿ ಲೈಂಗಿಕ ವೃತ್ತಿಯಲ್ಲಿ ತೊಡಗುವಂತೆ ಒತ್ತಾಯಿಸಿದ್ದನು. ಆಕೆ ಇದಕ್ಕೆ ನಿರಾಕರಿಸಿದ ಕಾರಣ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿದ್ಧಾರ್ಥ ನಗರದಲ್ಲಿರುವ ಪುಷ್ಪಾ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಪೊಲೀಸ್ ವರದಿಗಳ ಪ್ರಕಾರ, ಪುಷ್ಪಾ ಸುಮಾರು ಆರು ತಿಂಗಳ ಹಿಂದೆ ತನ್ನ ಪತಿಯಿಂದ ಬೇರ್ಪಟ್ಟು ನಂತರ ಶೇಖ್ ಜೊತೆ ಸಂಬಂಧ ಬೆಳೆಸಿದ್ದಳು. ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ ನಂತರ, ಅವರ ಸಂಬಂಧ ಹದಗೆಟ್ಟಿತ್ತು.
ಸಂಬಂಧದಲ್ಲಿ ಬಿರುಕು: ಅಧಿಕಾರಿಗಳ ಪ್ರಕಾರ, ಅವರಿಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು. ಶೇಖ್, ಪುಷ್ಪಾಳ ಮೇಲೆ ಅಕ್ರಮ ಸಂಬಂಧಗಳ ಆರೋಪ ಮಾಡುತ್ತಿದ್ದನು. ಪರಿಸ್ಥಿತಿ ಉಲ್ಬಣಗೊಂಡು, ಶೇಖ್ ಆಕೆಯನ್ನು ಲೈಂಗಿಕ ದಂಧೆಗೆ ಒತ್ತಾಯಿಸಲು ಯತ್ನಿಸಿದ್ದನು. ಇದು ಅವರ ಸಂಬಂಧದಲ್ಲಿ ಮತ್ತಷ್ಟು ಬಿರುಕು ಮೂಡಿಸಿತು. ಈ ಒತ್ತಡಗಳ ನಡುವೆ, ಶೇಖ್ ಪುಷ್ಪಾಳನ್ನು ಲೈಂಗಿಕ ದಂಧೆಗೆ ಮತ್ತು ತ್ವರಿತವಾಗಿ ಹಣ ಸಂಪಾದಿಸಲು ಹಲವು ಪುರುಷರೊಂದಿಗೆ ಸಂಬಂಧ ಹೊಂದಲು ಒತ್ತಾಯಿಸಿದ್ದಾನೆ. ಆದರೆ, ಪುಷ್ಪಾ ಇದನ್ನು ಬಲವಾಗಿ ವಿರೋಧಿಸಿ, ತನ್ನ ಕುಟುಂಬದ ಮನೆಗೆ ಹಿಂದಿರುಗಿದ್ದಳು.
ಕೊಲೆ ನಡೆದ ದಿನ: ಬುಧವಾರ ರಾತ್ರಿ, ಶೇಖ್ ಪುಷ್ಪಾಳ ಮನೆಗೆ ಬಂದು ಮತ್ತೆ ತನ್ನೊಂದಿಗೆ ಬರುವಂತೆ ಮನವೊಲಿಸಲು ಪ್ರಯತ್ನಿಸಿದನು. ಈ ವೇಳೆ, ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದನು. ಆಕೆ ಮತ್ತೆ ನಿರಾಕರಿಸಿದಾಗ, ವಾಗ್ವಾದ ತಾರಕಕ್ಕೇರಿತು.
ಪುಷ್ಪಾಳ ತಾಯಿ ಮತ್ತು ಸಹೋದರ ಮಧ್ಯಪ್ರವೇಶಿಸಿದ್ದು, ಇದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ಗದ್ದಲದ ನಡುವೆ, ಶೇಖ್ ಪುಷ್ಪಾಳ ಎದೆಯ ಎಡಭಾಗಕ್ಕೆ ಮತ್ತು ಕಾಲಿಗೆ ಚಾಕುವಿನಿಂದ ಇರಿದಿದ್ದಾನೆ. ಅತಿಯಾದ ರಕ್ತಸ್ರಾವದಿಂದಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶೇಖ್ ಶಮ್ಮಾ ಪತ್ತೆಗೆ ಬಲೆ ಬೀಸಿದ್ದಾರೆ.