ವಾರಣಾಸಿ: ಪರಸ್ಪರ ವಾಗ್ವಾದದ ನಂತರ ಹದಿಹರೆಯದ ಹುಡುಗಿಗೆ ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯ ಬಿಶಂಪುರ ಗ್ರಾಮದಲ್ಲಿ ನಡೆದಿದೆ.
ಪ್ರಾಚಿ ಕೇಸರವಾಣಿ ಎಂಬ ಉಪ ತಹಸೀಲ್ದಾರ್ ಆಗಿರುವ ಮಹಿಳಾ ಅಧಿಕಾರಿ ಈ ಪ್ರದೇಶದಲ್ಲಿ ಅಕ್ರಮವಾಗಿ ಜಮೀನು ಒತ್ತುವರಿ ಮಾಡಿಕೊಂಡಿರುವ ಕುರಿತು ಗ್ರಾಮಕ್ಕೆ ತೆರಳಿದ್ದರು. ಉಪ ತಹಸೀಲ್ದಾರ್ ಮತ್ತು ಯುವತಿಯ ನಡುವೆ ವಾಗ್ವಾದ ನಡೆದ ನಂತರ ಅಧಿಕಾರಿ, ಬಾಲಕಿಗೆ ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವರದಿಗಳ ಪ್ರಕಾರ, ವಾರಣಾಸಿಯ ಕಾಪ್ಸೆಥಿ ಪೊಲೀಸ್ ಠಾಣೆ ವ್ಯಾಪ್ತಿಯ ಭಿಶಂಪುರ ಗ್ರಾಮದಲ್ಲಿ ಕೆಲವು ಗ್ರಾಮಸ್ಥರು ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜಾಗ ಖಾಲಿ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಹೈಕೋರ್ಟ್ ಆದೇಶದ ಮೇರೆಗೆ ಉಪ ತಹಸೀಲ್ದಾರ್ ಪ್ರಾಚಿ ಕೇಸರವಾಣಿ ಸ್ಥಳಕ್ಕೆ ಆಗಮಿಸಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ರು. ಸ್ಥಳದಲ್ಲಿದ್ದ ಜನರು ಅತಿಕ್ರಮಣದ ವಿರುದ್ಧದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಉಪ ತಹಸೀಲ್ದಾರ್ ಅತಿಕ್ರಮಣದ ವಿರುದ್ಧ ಕ್ರಮಕೈಗೊಳ್ಳುತ್ತಿದ್ದಾಗ ಗುಂಪಿನಿಂದ ಹೊರಬಂದ ಯುವತಿಯೊಬ್ಬಳು ಪ್ರಾಚಿ ಕೇಸರವಾಣಿಗೆ ಹೈಕೋರ್ಟ್ ಆದೇಶ ಪ್ರತಿ ತೋರಿಸುವಂತೆ ಕೇಳಲು ಆರಂಭಿಸಿದ್ದಾಳೆ. ಇದಕ್ಕೆ ಸಿಟ್ಟಾದ ಮಹಿಳಾ ಅಧಿಕಾರಿ ಹುಡುಗಿಗೆ ಬೈದಿದ್ದಾರೆ. ಇಬ್ಬರ ನಡುವೆಯೂ ತೀವ್ರ ವಾಗ್ವಾದ ನಡೆಯಿತು. ವಾಗ್ವಾದದ ನಂತರ ಕೋಪಗೊಂಡ ಉಪ ತಹಸೀಲ್ದಾರ್ ಪ್ರಾಚಿ ಕೇಸರವಾಣಿ ಸಾರ್ವಜನಿಕರ ಮುಂದೆಯೇ ಹುಡುಗಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಸಾರ್ವಜನಿಕರ ಮುಂದೆ ಯುವತಿಗೆ ಕಪಾಳಮೋಕ್ಷ ಮಾಡಿದ್ದಕ್ಕೆ ನೆರೆದಿದ್ದವರು ಆಕ್ರೋಶ ವ್ಯಕ್ತಪಡಿಸಿದ್ರು. ಮಹಿಳಾ ಅಧಿಕಾರಿಗೆ ಘೇರಾವ್ ಮಾಡಿದ್ರು. ಗಲಾಟೆಯನ್ನು ಕಂಡು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಮಹಿಳಾ ಅಧಿಕಾರಿಗೆ ರಕ್ಷಣೆ ನೀಡಿದ್ರು.
ಆಕ್ರೋಶಭರಿತ ಜನಸ್ತೋಮ ಮಹಿಳಾ ಅಧಿಕಾರಿಯನ್ನು ವಿರೋಧಿಸಲು ಪ್ರಾರಂಭಿಸಿದ ನಂತರ ಅತಿಕ್ರಮಣ ವಿರುದ್ಧದ ಕ್ರಮವನ್ನು ಸ್ಥಗಿತಗೊಳಿಸಲಾಯಿತು. ಉಪ ತಹಸೀಲ್ದಾರ್ ಪ್ರಾಚಿ ಕೇಸರವಾಣಿ ಅವರ ಕ್ರಮದ ವಿರುದ್ಧ ಗ್ರಾಮಸ್ಥರು ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಮಹಿಳಾ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
https://twitter.com/TrulyMonica/status/1689328811811512320?ref_src=twsrc%5Etfw%7Ctwcamp%5Etweetembed%7Ctwterm%5E1689328811811512320%7Ctwgr%5E5f4da9aa4df15e8700cbafadc53728021c53b29a%7Ctwcon%5Es1_&ref_url=https%3A%2F%2Fwww.freepressjournal.in%2Findia%2Fup-news-woman-govt-officer-slaps-teenage-girl-after-heated-argument-in-varanasi-video-surfaces