ಕೊಪ್ಪಳ: ಸಂತಾನಹರಣ ಚಿಕಿತ್ಸೆಗೆ ಬಂದಿದ್ದ ಮಹಿಳೆ ಚಿಕಿತ್ಸೆಯ ವೇಳೆ ಸಾವನ್ನಪ್ಪಿದ ಘಟನೆ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಮಹಿಳೆ ಸಾವಿಗೆ ಕಾರಣವೆಂದು ಆರೋಪಿಸಿ ದೂರು ನೀಡಲಾಗಿದೆ.
ಸಿಂಧನೂರು ತಾಲೂಕಿನ ರತ್ನಾಪುರಹಟ್ಟಿ ಗ್ರಾಮದ ಮಲ್ಲಮ್ಮ(25) ಮೃತಪಟ್ಟ ಮಹಿಳೆ. ಯಲಬುರ್ಗಾ ತಾಲೂಕಿನ ಗಾಣಧಾಳಕ್ಕೆ ಹೆರಿಗೆಗೆ ಬಂದಿದ್ದ ಅವರು ಹೆರಿಗೆಯ ನಂತರ ಸಂತಾನಹರಣ ಚಿಕಿತ್ಸೆಗಾಗಿ ಹಿರೇವಂಕಲಕುಂಟಾ ಆಸ್ಪತ್ರೆಗೆ ದಾಖಲಾಗಿದ್ದರು.
ಮಂಗಳವಾರ ಅವರಿಗೆ ಸಂತನಾಹರಣ ಚಿಕಿತ್ಸೆಗಾಗಿ ಅರವಳಿಕೆ ಔಷಧ ನೀಡಿದ ಕೆಲವೇ ಸಮಯದಲ್ಲಿ ಅಸ್ವಸ್ಥರಾಗಿದ್ದಾರೆ. ಅವರಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಿದರೂ ಚೇತರಿಸಿಕೊಂಡಿಲ್ಲ. ಬಳಿಕ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಮಲ್ಲಮ್ಮ ಸಾವಿಗೆ ಕಾರಣವೆಂದು ಕುಟುಂಬದವರು ಆರೋಪಿಸಿ ಬೇವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.