ಕೀಟ ಕಡಿತದಿಂದ ಯುವತಿ ಸಾವು ; ಆಸ್ಪತ್ರೆಯಲ್ಲಿ ನಕಲಿ ಹೆಸರು ಕೊಟ್ಟು ಲಿವ್-ಇನ್ ಪಾಲುದಾರ ಪರಾರಿ !

ಗ್ವಾಲಿಯರ್ (ಮಧ್ಯಪ್ರದೇಶ): ಗ್ವಾಲಿಯರ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದ ಯುವತಿಯೊಬ್ಬರು ವಿಷಕಾರಿ ಕೀಟದ ಕಡಿತದಿಂದ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಯುವತಿ ಗಂಭೀರ ಸ್ಥಿತಿಯಲ್ಲಿದ್ದಾಗ ಆಕೆಯ ಪಾಲುದಾರ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನಡೆಯುತ್ತಿದ್ದಾಗಲೇ ಪರಾರಿಯಾಗಿದ್ದಾನೆ.

ಮಧ್ಯಪ್ರದೇಶದ ಮಾಲನ್‌ಪುರ್ ನಿವಾಸಿಯಾಗಿದ್ದ ಸೋನಿ ಎಂಬ ಯುವತಿ ಬಿಹಾರ ಮೂಲದವರಾಗಿದ್ದರು. ವರದಿಗಳ ಪ್ರಕಾರ, ಮಂಗಳವಾರ ಮುಂಜಾನೆ ಸೋನಿಗೆ ವಿಷಕಾರಿ ಕೀಟವೊಂದು ಕಚ್ಚಿದೆ. ಆಕೆಯ ಸ್ಥಿತಿ ಹದಗೆಡುತ್ತಿದ್ದಂತೆ, ಆಕೆಯ ಲಿವ್-ಇನ್ ಪಾಲುದಾರ, ಮನೆ ಮಾಲೀಕ ಮತ್ತು ಆಟೋ ಚಾಲಕನೊಂದಿಗೆ ಸೇರಿ ಮುರಾರ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಆತ ನಕಲಿ ಹೆಸರು ಮತ್ತು ವಿಳಾಸ ನೀಡಿ ಮಹಿಳೆಯನ್ನು ದಾಖಲಿಸಿ, ಚಿಕಿತ್ಸೆ ನಡೆಯುತ್ತಿದ್ದಾಗಲೇ ಅಲ್ಲಿಂದ ಪರಾರಿಯಾಗಿದ್ದಾನೆ. ದಾಖಲೆಗಳ ಕೊರತೆ ಮತ್ತು ಯುವತಿಯೊಂದಿಗಿನ ತನ್ನ ಸಂಬಂಧದ ಬಗ್ಗೆ ಪ್ರಶ್ನಿಸುವ ಭಯದಿಂದ ಆತ ಓಡಿಹೋಗಿದ್ದಾನೆ ಎಂದು ನಂಬಲಾಗಿದೆ.

ಸಿಸಿಟಿವಿ ಆಧಾರದಲ್ಲಿ ಆರೋಪಿ ಪತ್ತೆ, ಬಂಧನ

ಆಸ್ಪತ್ರೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಯುವತಿಯನ್ನು ಆಸ್ಪತ್ರೆಗೆ ಕರೆತಂದ ಆಟೋದ ನಂಬರ್ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಯುವತಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತಂದ ಮೂವರಲ್ಲಿ ಓರ್ವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ವರದಿಗಳ ಪ್ರಕಾರ, ಮೂರು ವರ್ಷಗಳ ಹಿಂದೆ ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ಸೋನಿ ಮತ್ತು ಈ ಯುವಕ ಭೇಟಿಯಾಗಿದ್ದರು. ಕ್ರಮೇಣ ಇಬ್ಬರ ನಡುವೆ ಸ್ನೇಹ ಬೆಳೆದು, ಮದುವೆಯಾಗದೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು. ಇಬ್ಬರೂ ಮಾಲನ್‌ಪುರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಎಸ್‌ಪಿ ಧರ್ಮವೀರ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿ, “ಯುವತಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾದ ಯುವಕನನ್ನು ಬಂಧಿಸಲಾಗಿದೆ. ಆತ ಕಳೆದ ಮೂರು ವರ್ಷಗಳಿಂದ ಯುವತಿಯೊಂದಿಗೆ ವಾಸಿಸುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ, ಆದರೆ ಮದುವೆಯಾದ ಬಗ್ಗೆ ಯಾವುದೇ ಪುರಾವೆಗಳನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ. ಪ್ರಕರಣದ ಸಂಪೂರ್ಣ ಸನ್ನಿವೇಶಗಳನ್ನು ತಿಳಿದುಕೊಳ್ಳಲು ತನಿಖೆ ಮುಂದುವರಿದಿದೆ.


Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read