ಬೆಂಗಳೂರು: ಪತಿ ಮಹಾಶಯ ನಡೆಸಿದ ಅಟ್ಟಹಾಸಕ್ಕೆ ಕೋಮಾಸ್ಥಿತಿಗೆ ಜಾರಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಪೀಣ್ಯ ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ.
26 ವರ್ಷದ ಪ್ರೀತಿ ಸಿಂಗ ಮೃತ ಮಹಿಳೆ. ಪತಿ ಛೋಟೆಲಾಲ್ ಸಿಂಗ್ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾಗಿದ್ದ ಮಹಿಳೆ ಕೋಮಾಗೆ ಜಾರಿದ್ದರು.
ಸೆ.24ರಂದು ಹಾಡಹಗಲೇ ಕುಡಿದು ಬಂದಿದ್ದ ಪತಿ, ಪತ್ನಿ ಪ್ರೀತಿಗೆ ನೀರು ಕೇಳಿದ್ದಾನೆ. ನಾನು ಕೆಲಸಕ್ಕೆ ಹೋಗಲು ಸಮಯವಾಗುತ್ತಿದೆ. ನೀನೇ ನೀರು ತೆಗೆದುಕೊಂಡು ಕುಡಿ ಎಂದು ಹೇಳಿ ಕೆಲಸಕ್ಕೆ ಹೋಗಲು ರೆಡಿಯಾಗಿದ್ದಾಳೆ. ಇಷ್ಟಕ್ಕೆ ಕೋಪಗೊಂಡ ಪತಿ, ಲಟ್ಟಣಿಗೆಯಿಂದ ಪತ್ನಿ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಪತ್ನಿ ಪ್ರೀತಿ ಸ್ಥಳದಲ್ಲೇ ಕುಸಿದು ಬಿದ್ದು ಕೋಮಾಗೆ ಜಾರಿದ್ದಾಳೆ.
ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡದರೂ ಫಲಕಾರಿಯಾಗಿಲ್ಲ. ಪತಿ ಹಲ್ಲೆಯಿಂದಾಗಿ ಪ್ರೀತಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತಿ ಛೋಟೆಲಾಲ್ ನನ್ನು ಬಂಧಿಸಿದ್ದಾರೆ.