ಬೆಂಗಳೂರು: ವಿಧವೆ ಮಹಿಳೆಯ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಹೇಳಿ ಬೆದರಿಕೆಯೊಡ್ಡಿ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಪತಿಯನ್ನು ಕಳೆದುಕೊಂಡಿದ್ದ ಮಹಿಳೆಗೆ ಸಹಾಯ ಮಾಡುವುದಾಗಿ ಹೇಳಿ ಪರಿಚಯನಾಗಿದ್ದ ವ್ಯಕ್ತಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಆಕೆಯ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ವ್ಯಕ್ತಿ ಬೆದರಿಕೆಯೊಡ್ಡಿದ್ದಾನೆ.
ಇದರಿಂದ ಬೇಸತ್ತ ಮಹಿಳೆ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ 2021ರಲ್ಲಿ ವ್ಯಕ್ತಿಗೆ ಪರಿಚಯವಾಗಿದ್ದರು. ನಾಲ್ಕುವರ್ಷದ ಮಗಳಿದ್ದಾಳೆ. ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಈ ವೇಳೆ ಚಂದ್ರಶೇಖರ್ ಎಂಬ ವ್ಯಕ್ತಿ ಮಹಿಳೆಗೆ ಪರಿಚಯನಾಗಿದ್ದಾನೆ. ಹೀಗೆ ಆರಂಭವಾದ ಪರಿಚಯದಿಂದ ವ್ಯಕ್ತಿ ಮಹಿಳೆಯನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಮಹಿಳೆ ಗರ್ಭಿಣಿಯಾಗುತ್ತಿದ್ದಂತೆ ಮಾತ್ರೆ ಕೊಟ್ಟು ಅಬಾರ್ಷನ್ ಮಾಡಿಸಿದ್ದ. ಇದೇ ವೇಳೆ ಕವಿತಾ ಎಂಬ ಮಹಿಳೆ ತಾನು ಚಂದ್ರಶೇಖರ್ ಪತ್ನಿ ಎಂದು ಹೇಳಿ ಕರೆ ಮಾಡಿ ಜಗಳವಾಡಿದ್ದಳು. ಕವಿತಾ, ಸಾಕಮ್ಮ, ಚಂದ್ರಶೇಖರ್ ಮೂವರು ಮಹಿಳೆಗೆ ಬೆದರಿಕೆ ಹಾಕಿದ್ದು, ಚಂದ್ರಶೇಖರ್ ಬ್ಲ್ಯಾಕ್ ಮೇಲ್ ಮಾಡಿ ವಿಡಿಯೋ ವೈರಲ್ ಮಾಡುವುದಾಗಿ ಹೇಳುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
