ಬೆಂಗಳೂರು: ಬೈಕ್ ಸವಾರನ ಮೇಲೆ ವಿಂಗ್ ಕಮಾಂಡರ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಬೈಕ್ ಸವಾರನ ಮೇಲೆ ವಿಂಗ್ ಕಮಾಂಡರ್ ಹಲ್ಲೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆತ ನಾಪತ್ತೆಯಾಗಿದ್ದಾನೆ ಎಂದು ತಿಳಿಸಿದರು.
ವಿಂಗ್ ಕಮಾಂಡರ್ ಶಿಲಾದಿತ್ಯ ಪಶ್ಚಿಮ ಬಂಗಾಳ ಮೂಲದವನು. ಆತ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.
ಬೈಕ್ ಸವಾರನನ್ನು ಅಡ್ಡಗಟ್ಟಿ, ಬೀಳಿಸಿ ಮನಬಂದಂತೆ ಹಲ್ಲೆ ನಡೆಸಿದ್ದ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್, ಬಳಿಕ ಬೈಕ್ ಸವಾರನೇ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ತನ್ನ ಹಣೆ, ಮೂಗಿನ ಭಾಗದಲ್ಲ್ಲಿ ಗಾಯವಾಗಿದೆ ಎಂದು ರಕ್ತ ಸೋರುತ್ತಿರುವ ರೀತಿಯ ವಿಡಿಯೋ ಮಾಡಿ ಸುಳ್ಳುಕಥೆ ಕಟ್ಟಿದ್ದ. ಆದರೆ ಘಟನಾ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮರಾದ ದೃಶ್ಯಗಳು ವಿಂಗ್ ಕಮಾಂಡರ್ ಬೈಕ್ ಸವಾರನ ಮೇಲೆ ನಡೆಸಿದ್ದ ಅಟ್ಟಹಾಅಸವನ್ನು ಬಯಲು ಮಾಡಿತ್ತು.