ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರಾವಧಿ ಈಗಾಗಲೇ ಮುಕ್ತಾಯವಾಗಿದ್ದರೂ ಅವರನ್ನು ಮುಂದುವರೆಸಲಾಗಿದ್ದು, ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಪಕ್ಷವು ಸಜ್ಜಾಗಿದೆ. ಏಪ್ರಿಲ್ ಅಂತ್ಯದೊಳಗೆ ಹೊಸ ಅಧ್ಯಕ್ಷರ ನೇಮಕ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಹಿಂದೆ, ಸಂಸತ್ ಬಜೆಟ್ ಅಧಿವೇಶನ ಮುಕ್ತಾಯದ ನಂತರ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪಕ್ಷವು ಹೇಳಿತ್ತು.
ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೂ ಮುನ್ನ, 13 ರಾಜ್ಯಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಆಯ್ಕೆ ಪೂರ್ಣಗೊಂಡಿದೆ. ಉಳಿದ ರಾಜ್ಯಗಳ ಆಯ್ಕೆ ಪೂರ್ಣಗೊಂಡ ನಂತರ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ನಿಯಮದ ಪ್ರಕಾರ, ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೂ ಮುನ್ನ ಶೇ. 50ರಷ್ಟು ರಾಜ್ಯಗಳ ಸಂಘಟನಾ ಚುನಾವಣೆ ಪೂರ್ಣಗೊಳ್ಳಬೇಕು. ಆದ್ದರಿಂದ ಕನಿಷ್ಠ ಆರು ರಾಜ್ಯಗಳ ಅಧ್ಯಕ್ಷರ ಆಯ್ಕೆ ಪೂರ್ಣಗೊಂಡ ನಂತರವೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಲಿದೆ.