ಕಾನ್ಪುರ: ಪತಿ ಮಹಾಶಯನೊಬ್ಬ ಪತ್ನಿ ಜೊತೆ ಜಗಳವಾಡಿ ಆಕೆಯ ಮೇಲೆ ಹಲ್ಲೆ ನಡೆಸಿ ಮನೆ ಬಿಟ್ಟು ಹೋಗಿದ್ದು, ಪತಿಗೆ ವಿಡಿಯೋ ಕಾಲ್ ಮಾಡಿದ ಪತ್ನಿ ಬಳಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಕಾನ್ಪುರದ ರಾವತ್ಪುರದಲ್ಲಿ ಈ ಘಟನೆ ನಡೆದಿದೆ. ಶುಭಂ ದಿವಾಕರ್ ಎಂಬಾತ ಮದ್ಯವ್ಯಸನಿಯಾಗಿದ್ದು, ಮನೆಗೆ ಬಂದವನೇ ಪತ್ನಿ ಬಳಿ ಹಣ ನೀಡುವಂತೆ ಕೇಳಿದ್ದಾನೆ. ತನ್ನ ಬಳಿ ಹಣವಿಲ್ಲವೆಂದಾಗ ಆಕೆಯನ್ನು ಮನಬಂದಂತೆ ಥಳಿಸಿದ್ದಾನೆ. ಮನೆಯಲ್ಲಿದ್ದ ಹಣ ಎತ್ತಿಕೊಂಡು ಮತ್ತೆ ಮದ್ಯ ಕುಡಿಯಲು ಹೋಗಿದ್ದಾನೆ.
ಮನೆಯಿಂದ ಹೊರ ಹೋದ ಪತಿ ಎಷ್ಟು ಹೊತ್ತಾದರೂ ಬಾರದಿದ್ದಾಗ ಪತ್ನಿ ಮೋನಾ ಪತಿಗೆ ವಿಡಿಯೋ ಕಾಲ್ ಮಾಡಿದ್ದಾಳೆ. ಫೋನ್ ನಲ್ಲಿ ಮಾತನಾಡುತ್ತಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶುಭಂ ದಿವಾಕರ್ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ ಎಂದು ಗೊತ್ತಾಗುತ್ತಿದ್ದಂತೆ ಮನೆಯತ್ತ ಧಾವಿಸಿದ್ದಾನೆ ಮನೆ ಬಾಗಿಲು ಒಡೆದು ಒಳಗೆ ಹೋಗುವಷ್ಟರಲ್ಲಿ ಪತ್ನಿ ನೇಣಿಗೆ ಕೊರಳೊಡ್ಡಿದ್ದಾಳೆ.
ಮೋನಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮೋನಾ ಸ್ನೇಹಿತರು ಸ್ಥಳಕ್ಕಾಗಮಿಸಿ ಆಕೆಯ ಪತಿಯನ್ನು ಥಳಿಸಿದ್ದಾರೆ. ಸಾಲದ್ದಕ್ಕೆ ವಿಡಿಯೋ ಕಾಲ್ ನ್ನು ಕೂಡ ಪತಿ ಡಿಲಿಟ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಮೋನಾ ಹಾಗೂ ಶುಭಂ ಏಳು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಮಹಾಶಯನ ಕುಡಿತದ ಚಟಕ್ಕೆ ಪತ್ನಿಯ ಜೀವವೇ ಹೋಗಿದೆ.
