ವಿಜಯಪುರ: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅಂತ್ಯಕಾಲ ಬಂದಿದೆ. ದೀಪ ಆರುವ ಮೊದಲು ಜೋರಾಗಿ ಉರಿಯುತ್ತದೆ. ಅದೇ ರೀತಿ ಕಾಶಪ್ಪನವರ ಮಾಡುತ್ತಿದ್ದಾರೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ವಿಜಯಾನಂದ ಕಾಶಪ್ಪನವರ ಹಿಂದೆ ಪಂಚಮಸಾಲಿ ಸಮಾಜದವರು ಯಾರೂ ಇಲ್ಲ. ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಸ್ವಾಮೀಜಿಯವರನ್ನು ಉಚ್ಛಾಟನೆ ಮಾಡಲು ಕಾಶಪ್ಪನವರ ಯಾರು? ಇದೇನು ರಾಜಕೀಯ ಪಕ್ಷವೇ ಎಂದು ಪ್ರಶ್ನಿಸಿದ್ದಾರೆ.
ಸಮುದಾಯಕ್ಕಾಗಿ ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೋರಾಟ ನಡೆಸುತ್ತಿದ್ದಾರೆ. ಇಡೀ ಸಮಾಜ ಅವರ ಹಿಂದೆ ಇದೆ. ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದ, ಡಿ2 ಪ್ರವರ್ಗ ಸ್ವಾಮೀಜಿ ಹೋರಾಟದ ಫಲವಾಗಿದೆ ಎಂದು ಯತ್ನಾಳ್ ಹೇಳಿದ್ದಾರೆ.