ಕೋಲ್ಕತ್ತಾ: ವೈದ್ಯನೊಬ್ಬ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಬದಲಾಗಿ ಅಪೆಂಡಿಕ್ಸ್ ಸರ್ಜರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿದ್ದು, ವೈದ್ಯನೊಬ್ಬನ ಹಣದ ಆಸೆಗೆ ರೋಗಿ ಸಂಕಷ್ಟಕ್ಕೀಡಾಗಿದ್ದಾರೆ.
ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿದರೆ ವಿಮೆ ಹಣ ಸಿಗಲ್ಲ ಎಂಬ ಕಾರಣಕ್ಕೆ ಬಿಸ್ವಜಿತ್ ಎಂಬ ವೈದ್ಯ ಬಿಸ್ವಜಿತ್ ದಾಸ್ ಎಂಬ ರೋಗಿಗೆ ಈ ರೀತಿ ಮಾಡಿದ್ದಾನೆ ಎಂದು ರೋಗಿಯ ಕುಟುಂಬ ಆರೋಪಿಸಿದೆ.
ಬಿಸ್ವಜಿತ್ ದಾಸ್ ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ ಪಾಣಿಹತಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಡಾ.ಬಿಸ್ವಜಿತ್ ಎಂಬುವವರು ತನ್ನ ಆಸ್ಪತ್ರೆಗೆ ಬಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಇದಕ್ಕೆ ಒಪ್ಪಿದ ರೋಗಿ ಬಿಸ್ವಜಿತ್ ದಾಸ್, ಡಾ.ಬಿಸ್ವಜಿತ್ ಹೇಳಿದ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯ ತಮ್ಮ ಸ್ವಾಸ್ಥ್ಯ ಸಾಥಿ ಕಾರ್ಡ್ ಮೂಲಕ ತಮ್ಮ ನರ್ಸಿಂಗ್ ಹೋಂ ನಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ಭರವಸೆ ಕೊಟ್ಟಿದ್ದಾರೆ. ಆದರೆ ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಿದರೆ ವಿಮೆ ಹಣ ಬರಲ್ಲವೆಂದು ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಶಸ್ತ್ರಚಿಕಿತ್ಸೆ ಪಡೆದು ಕೆಲ ದಿನಗಳಾದರೂ ರೋಗಿ ತನ್ನ ಹೊಟ್ಟೆಯ ಕೆಳಭಾಗದಲ್ಲಿ ಊದಿಕೊಂಡಿದೆ ಹಾಗೂ ವಿಪರೀತ ನೋವು ಹೆಚ್ಚುತ್ತಲೇ ಇದೆ ಎಂದು ಮತ್ತೆ ವೈದ್ಯರನ್ನು ಭೇಟಿಯಾಗಿದ್ದಾರೆ. ಆದರೆ ವೈದ್ಯರು ಆ ವಿಚಾರ ಬಿಟ್ಟು ಬೇರೆ ಏನನ್ನೋ ಮಾತನಾಡುತ್ತಲೇ ಸಮಜಾಯಿಷಿ ನೀಡುತ್ತಿದ್ದರು. ರೋಗಿ ಹರ್ನಿಯಾ ನೋವು ಹೆಚ್ಚಾಗುತ್ತಿದ್ದಂತೆ ಬೇರೊಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಪರೀಕ್ಷಿಸಿದಾಗ ಹರ್ನಿಯಾ ಶಸ್ತ್ರಚಿಕಿತ್ಸೆಯನ್ನೇ ಮಾಡಿಲ್ಲ ಎಂಬುದು ಗೊತ್ತಾಗಿದೆ. ಬದಲಾಗಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ಪ್ರಕಾರ ವೈದ್ಯನ ವಿರುದ್ಧ ಈ ಹಿಂದೆಯೂ ಹಲವು ದೂರುಗಳು ದಾಖಲಾಗಿವೆ. ಈ ಪ್ರಕರಣ ಸಾಬೀತಾದರೆ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.