ತಮ್ಮ ಮಗಳ ಹೆರಿಗೆಗಾಗಿ ನಾನ್ ಎಸಿ ಆಸ್ಪತ್ರೆಯ ಕೊಠಡಿಯನ್ನು ಕಾಯ್ದಿರಿಸಿದ್ದಾರೆ ಎಂದು ತಿಳಿದ ಗರ್ಭಿಣಿಯ ಕುಟುಂಬದವರು ಆಕೆಯ ಪತಿಯ ಕುಟುಂಬಸ್ಥರನ್ನು ಮನಬಂದಂತೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.
ಆಘಾತಕಾರಿ ಘಟನೆಯನ್ನ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಗರ್ಭಿಣಿಯ ಅತ್ತೆ ಮಾವನ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ ಗರ್ಭಿಣಿಯನ್ನು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಆಸ್ಪತ್ರೆಯ ಕೋಣೆಯಲ್ಲಿ ಎಸಿ ಇರಲಿಲ್ಲ ಎಂದು ತಿಳಿದ ಮಹಿಳೆಯ ಕುಟುಂಬವು ಆಕೆಯ ಗಂಡನ ಪೋಷಕರು ಮತ್ತು ಸಹೋದರಿಯರನ್ನು ಥಳಿಸಿದ್ದಾರೆ.
ಘಟನೆಯ ವೈರಲ್ ವೀಡಿಯೊ ಎರಡು ಕುಟುಂಬಗಳು ಉತ್ತರಪ್ರದೇಶದ ಬಾರಾಬಂಕಿಯ ರಸ್ತೆಗಳಲ್ಲಿ ಹೊಡೆದಾಡುವುದನ್ನು ತೋರಿಸುತ್ತದೆ. ವೀಡಿಯೊದಲ್ಲಿ ಎರಡು ಕುಟುಂಬಗಳ ಜನರು ಪರಸ್ಪರ ಗುದ್ದುವುದು, ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಜನ, ಕೌಟುಂಬಿಕ ಕಲಹದಲ್ಲಿ ಹಸ್ತಕ್ಷೇಪ ಮಾಡದೆ ಗಲಾಟೆ ನೋಡುತ್ತಾ ನಿಂತಿದ್ದಾರೆ.
ಹಲ್ಲೆಯ ನಂತರ ಗರ್ಭಿಣಿಯ ಮಾವ ರಾಮ್‌ಕುಮಾರ್ ಪೊಲೀಸರನ್ನು ಸಂಪರ್ಕಿಸಿ ಜಗಳಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ತನ್ನ ಸೊಸೆಯ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ. ರಾಮ್‌ಕುಮಾರ್ ಅವರ ದೂರಿನ ಪ್ರಕಾರ ಅವರು ತಮ್ಮ ಗರ್ಭಿಣಿ ಸೊಸೆಯನ್ನು ಬಾರಾಬಂಕಿಯ ಸಿವಿಲ್ ಲೈನ್ಸ್ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಯ ಪೋಷಕರು ಮತ್ತು ಸಂಬಂಧಿಕರು ಆಸ್ಪತ್ರೆಗೆ ಬಂದು ತಮ್ಮ ಮಗಳ ಹೆರಿಗೆಗೆ ಹವಾನಿಯಂತ್ರಿತ ರೂಂ ಬುಕ್ ಮಾಡುವಂತೆ ಬಲವಂತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಎಸಿ ಕೊಠಡಿ ವ್ಯವಸ್ಥೆ ಮಾಡಲು ವಿಫಲವಾದ ಕಾರಣಕ್ಕಾಗಿ ರಾಮ್‌ಕುಮಾರ್ ಮತ್ತು ಅವರ ಕುಟುಂಬಸ್ಥರನ್ನು ನಿಂದಿಸಲು ಪ್ರಾರಂಭಿಸಿದರು. ಮೌಖಿಕ ಗಲಾಟೆ ನಂತರ ತೀವ್ರಗೊಂಡ ಕಚ್ಚಾಟ ಹಲ್ಲೆಗೆ ತಿರುಗಿತು. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
https://twitter.com/priyarajputlive/status/1676501352665497601?ref_src=twsrc%5Etfw%7Ctwcamp%5Etweetembed%7Ctwterm%5E1676501352665497601%7Ctwgr%5E00fd2c4b2880a1cfb7121025824403742fe8ac71%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiac2390847183200-epaper-dhf6af4a9befa548589eba0f15b9db5a4f%2Fwatchupfamilythrashedbypregnantdaughterinlawsrelativesforbookingnonacroomathospital-newsid-n515666540