ವರುಣನ ಆರ್ಭಟದಿಂದಾಗಿ ಹಿಂಡನ್ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಉತ್ತರ ಪ್ರದೇಶದ ನೋಯ್ಡಾದ ಇಕೋಟೆಕ್ನ ಮೂರು ಪ್ರತ್ಯೇಕ ಪ್ರದೇಶಗಳಲ್ಲಿ ಸಾಕಷ್ಟು ವಾಹನಗಳು ಜಲಾವೃತವಾಗಿವೆ. ನೀರಿನ ಮಟ್ಟ ಹೆಚ್ಚುತ್ತಲೇ ಇದ್ದು ಇಕೋಟೆಕ್ ಬಳಿ ಇರುವ ಸುತ್ತಮುತ್ತಲ ಪ್ರದೇಶಗಳು ಮುಳುಗಡೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಉತ್ತರ ಭಾರತದಲ್ಲಿ ನಿರಂತರ ಮಳೆಯಾಗುತ್ತಿದ್ದು ನೋಯ್ಡಾ ಹಾಗೂ ಗಾಜಿಯಾಬಾದ್ನಲ್ಲಿ ಹಲವಾರು ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು ಈ ಪರಿಸ್ಥಿತಿ ಸಂಭವಿಸಿದೆ ಎನ್ನಲಾಗಿದೆ.
ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ನೀಡಿದ್ದರು. ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದ ತಗ್ಗು ಪ್ರದೇಶಗಳಿಗೆ ತೆರವು ಕಾರ್ಯಾಚರಣೆ ನಡೆಸಿದ್ದರು. ಭಾನುವಾರ ಗೌತಮ್ ಬುದ್ಧ ನಗರದ ಸ್ಥಳೀಯರ ಆಡಳಿತವು ಹಿಂಡೋನ್ ಉದ್ದಕ್ಕೂ ತಗ್ಗು ಪ್ರದೇಶಗಳಿಗೆ ಮತ್ತೊಂದು ಪ್ರವಾಹದ ಎಚ್ಚರಿಕೆ ನೀಡಿತ್ತು. ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಈಗಾಗಲೇ ಐದು ಗ್ರಾಮಗಳ ಸುಮಾರು 200 ಜನರನ್ನು ಸ್ಥಳಾಂತರಿಸಲಾಗಿದೆ. ನಿರಾಶ್ರಿತರಿಗೆ ಈಗಾಗಲೇ ವಸತಿ , ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅತುಲ್ ಕುಮಾರ್ ಮಾಹಿತಿ ನೀಡಿದ್ದಾರೆ.
https://twitter.com/i/status/1683830481467633666