ಗುಜರಾತ್‌ನ ಅಮ್‌ರೇಲಿ ಜಿಲ್ಲೆಯ ಕೋವಾಯ ಗ್ರಾಮದಲ್ಲಿ ರಾತ್ರಿ ವೇಳೆ ಸಿಂಹವೊಂದು ಅಡುಗೆ ಮನೆಗೆ ನುಗ್ಗಿದ ಭಯಾನಕ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೂಲು ಲಖೋತ್ರ ಅವರ ಮನೆಯಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕುಟುಂಬದವರೆಲ್ಲರೂ ಮಲಗಿದ್ದರು. ಮೊದಲು ಬೆಕ್ಕು ಬಂದಿರಬಹುದೆಂದು ಭಾವಿಸಿದ್ದರು. ಆದರೆ, ಅದು ಸಿಂಹವೆಂದು ತಿಳಿದು ಕುಟುಂಬ ಭಯಭೀತವಾಗಿದೆ.
ಸಿಂಹ ಅಡುಗೆ ಮನೆಯ ಗೋಡೆ ಮತ್ತು ತೊಲೆಗಳಿಗೆ ಡಿಕ್ಕಿ ಹೊಡೆಯುತ್ತಿದ್ದಂತೆ, ಗಾಬರಿಗೊಂಡ ನಿವಾಸಿಗಳು ಟಾರ್ಚ್ ಬೆಳಗಿಸಿ, ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯ ಜಿನಾ ಲಖೋತ್ರಾ, “ಸಿಂಹ 12 ಅಡಿ ಗೋಡೆಯನ್ನು ಹಾರಿ ಮನೆಗೆ ನುಗ್ಗಿದೆ. ಕುಟುಂಬದ ಕೂಗಾಟ ಕೇಳಿ ನೆರೆಹೊರೆಯವರು ಎಚ್ಚರಗೊಂಡು ತಕ್ಷಣ ಓಡಿಬಂದರು. ಸಿಂಹವನ್ನು ಹೆದರಿಸಿ ದಾಳಿ ಮಾಡದಂತೆ ಎಚ್ಚರಿಕೆಯಿಂದ ಶಬ್ದ ಮಾಡಿದೆವು,” ಎಂದು ವಿವರಿಸಿದ್ದಾರೆ.
ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸಿಂಹವನ್ನು ಯಶಸ್ವಿಯಾಗಿ ಹೊರಗೆ ಕರೆದೊಯ್ದಿದ್ದಾರೆ. ಅರಣ್ಯ ಉಪ ಸಂರಕ್ಷಣಾಧಿಕಾರಿ ಜಯೆನ್ ಪಟೇಲ್, “ಈ ಸಿಂಹ ಆರು ಸಿಂಹಗಳ ಗುಂಪಿನ ಭಾಗವಾಗಿದೆ. ಈ ಸಿಂಹಗಳು ಆಗಾಗ ಬೇಟೆಯ ಹುಡುಕಾಟದಲ್ಲಿ ಹಳ್ಳಿಗಳಿಗೆ ಬರುತ್ತವೆ. ಇಂತಹ ಘಟನೆಗಳು ಅಪರೂಪ” ಎಂದು ಹೇಳಿದ್ದಾರೆ.
ಈ ಗ್ರಾಮವು ಅರಣ್ಯ ಮತ್ತು ಕರಾವಳಿ ಪ್ರದೇಶಗಳಿಗೆ ಹತ್ತಿರವಿರುವುದರಿಂದ ಸಿಂಹಗಳನ್ನು ಸಾಮಾನ್ಯವಾಗಿ ಕಾಣಬಹುದು. ಸ್ಥಳೀಯರು ಅವುಗಳೊಂದಿಗೆ ಬದುಕಲು ಕಲಿತಿದ್ದಾರೆ. ಪಿಪಾವಾವ್ ಬಂದರು ಕೂಡ ಆಗಾಗ ಸಿಂಹಗಳ ಬಗ್ಗೆ ವರದಿ ಮಾಡುತ್ತದೆ. ಅಮ್‌ರೇಲಿ ಜಿಲ್ಲೆಯಲ್ಲಿ ಸುಮಾರು 150 ಸಿಂಹಗಳಿವೆ, ಗೋಡೆಗಳನ್ನು ಹಾರಿ ವರಾಂಡಗಳು ಮತ್ತು ಕೊಟ್ಟಿಗೆಗಳಿಗೆ ಸಿಂಹಗಳು ಬರುವುದು ಸಾಮಾನ್ಯವಾಗಿದೆ.
Lion breaks into Indian home like a scene from Tom & Jerry.#Wildlife #CloseCall #Unbelievable #Viral #News #HKeye pic.twitter.com/hlqQZdqxgL
— HKeye (@HKeye_) April 3, 2025