ಡೆಟ್ರಾಯಿಟ್ ಮೂಲದ ರಾಪರ್ ಮತ್ತು ಪ್ರಭಾವಿ ದಜುವಾ ಬ್ಲಾಂಡಿಂಗ್, ತಮ್ಮ ವೇದಿಕೆಯ ಹೆಸರು ಡ್ಯಾಂಕ್ ಡೆಮಾಸ್‌ನಿಂದ ಚಿರಪರಿಚಿತರು, ಕ್ಯಾಬ್ ಸೇವೆ ಲಿಫ್ಟ್ ವಿರುದ್ಧ ದೂರು ದಾಖಲಿಸಿದ್ದಾರೆ. ತಮ್ಮ ತೂಕದ ಕಾರಣಕ್ಕೆ ಲಿಫ್ಟ್ ಚಾಲಕ ತಮ್ಮನ್ನು ಕರೆದುಕೊಂಡು ಹೋಗಲು ನಿರಾಕರಿಸಿದ ಕಾರಣಕ್ಕೆ ಅವರು ಈ ಕ್ರಮ ಕೈಗೊಂಡಿದ್ದಾರೆ. 220 ಕೆ.ಜಿ ತೂಕವಿರುವ ಬ್ಲಾಂಡಿಂಗ್ ಅವರು, ಒಂದು ಸಣ್ಣ ಕಾರಿನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಚಾಲಕ ಹೇಳಿದ್ದಾಗಿ ತಿಳಿಸಿದ್ದಾರೆ.
ಈ ಘಟನೆ ನಡೆದ ಕೆಲ ವಾರಗಳ ನಂತರ, ಬ್ಲಾಂಡಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಎಸ್‌ಯುವಿಯಲ್ಲಿ ಸುಲಭವಾಗಿ ಕುಳಿತುಕೊಳ್ಳುವುದನ್ನು ತೋರಿಸಿದ್ದಾರೆ. ಈ ವಿಡಿಯೋವನ್ನು 24th ಮತ್ತು ಲಪೀರ್ ಕಾರ್ ಡೀಲರ್‌ಶಿಪ್‌ನ ಸಹಭಾಗಿತ್ವದಲ್ಲಿ ಮಾಡಲಾಗಿದೆ. ಚಾಲಕ ಹೇಳಿದ ಮಾತನ್ನು ಸುಳ್ಳು ಎಂದು ಸಾಬೀತುಪಡಿಸುವುದು ಇದರ ಉದ್ದೇಶವಾಗಿತ್ತು. ಆದರೆ, ಈ ವಿಡಿಯೋ ನೋಡಿದ ಕೆಲವರು ಬ್ಲಾಂಡಿಂಗ್ ಅವರನ್ನು ಬೆಂಬಲಿಸಿದರೆ, ಇನ್ನು ಕೆಲವರು ಟೀಕಿಸಿದ್ದಾರೆ.
“ಇದು ಸಾಕ್ಷಿಯಾಗಿ ಉತ್ತಮ ನಡೆ,” ಎಂದು ಕೆಲವರು ಹೇಳಿದರೆ, “ಅದು ಸಣ್ಣ ಸೆಡಾನ್ ಆಗಿತ್ತು, ಇದು ಎಸ್‍ಯುವಿ. ಅದಕ್ಕೂ ಇದಕ್ಕೂ ವ್ಯತ್ಯಾಸವಿದೆ,” ಎಂದು ಇನ್ನು ಕೆಲವರು ವಾದಿಸಿದ್ದಾರೆ. “ಸೀಟ್ ಬೆಲ್ಟ್ ಹಾಕಿಕೊಂಡಿದ್ದೀರಾ” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಜನವರಿ 18ರಂದು ಬ್ಲಾಂಡಿಂಗ್ ಅವರು ಡೆಟ್ರಾಯಿಟ್ ಲಯನ್ಸ್ ಪಾರ್ಟಿಗೆ ಹೋಗಲು ಲಿಫ್ಟ್ ಕ್ಯಾಬ್ ಬುಕ್ ಮಾಡಿದ್ದರು. ಆದರೆ, ಚಾಲಕ ಅವರ ತೂಕ ಜಾಸ್ತಿ ಇದ್ದ ಕಾರಣ ಕಾರಿನಲ್ಲಿ ಕೂರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬ್ಲಾಂಡಿಂಗ್ ಅವರು ಎಷ್ಟೇ ಮನವೊಲಿಸಿದರೂ ಚಾಲಕ ಒಪ್ಪಲಿಲ್ಲ. ಇದರಿಂದ ಬೇಸರಗೊಂಡ ಬ್ಲಾಂಡಿಂಗ್, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಘಟನೆಯ ನಂತರ, ಬ್ಲಾಂಡಿಂಗ್ ಅವರು ಲಿಫ್ಟ್ ವಿರುದ್ಧ ಮಿಚಿಗನ್‌ನ ತಾರತಮ್ಯ ವಿರೋಧಿ ಕಾನೂನುಗಳ ಉಲ್ಲಂಘನೆಗಾಗಿ ದೂರು ದಾಖಲಿಸಿದ್ದಾರೆ. ತೂಕದ ಕಾರಣಕ್ಕೆ ಸಾರಿಗೆ ನಿರಾಕರಿಸುವುದು, ಜನಾಂಗ ಅಥವಾ ಧರ್ಮದ ಕಾರಣಕ್ಕೆ ನಿರಾಕರಿಸಿದಂತೆ ಎಂದು ಅವರ ವಕೀಲರು ವಾದಿಸಿದ್ದಾರೆ.