ಕೊಲ್ಕತ್ತಾ: ವಕ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುಸ್ಲಿಂ ಬಾಹುಳ್ಯದ ಮುರ್ಷಿದಾಬಾದ್ ನಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಇದರ ಪರಿಣಾಮ ನೂರಾರು ಸಂತ್ರಸ್ತ ಹಿಂದೂ ಕುಟುಂಬಗಳು ಪ್ರಾಣ ಭೀತಿಯಿಂದ ನೆರೆಯ ಮಾಲ್ಡಾ ಜಿಲ್ಲೆಗೆ ಪಲಾಯನ ಮಾಡಿವೆ.
ಅಧಿಕಾರಿಗಳೇ ಹಿಂದೂಗಳ ಪಲಾಯನದ ಕುರಿತಾಗಿ ಮಾಹಿತಿ ನೀಡಿದ್ದಾರೆ. ನೆರೆಯ ಮಾಲ್ಡಾಕ್ಕೆ ನದಿ ದಾಟಿಕೊಂಡು 400ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಜೀವ ಭಯದಿಂದ ವಲಸೆ ಹೋಗಿವೆ ಎನ್ನಲಾಗಿದೆ. ವಕ್ಪ್ ಕಾಯ್ದೆ ವಿರುದ್ಧ ಭುಗಿಲೆದ್ದ ಹಿಂಸಾಚಾರದಿಂದ ಜೀವ ಮತ್ತು ಮಾನ ಭಯದಿಂದ ಹಿಂದೂ ಕುಟುಂಬಗಳು ಮನೆಯನ್ನು ತೊರೆದು ಹೋಗಿವೆ.
1990 ದಶಕದಲ್ಲಿ ಕಾಶ್ಮೀರದಲ್ಲಿ ಸಾಮೂಹಿಕ ವಲಸೆಯನ್ನು ಇದು ನೆನಪಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಮತ್ತೆ 12 ಮಂದಿಯನ್ನು ಹಿಂಸಾಚಾರ ಪ್ರಕರಣ ಸಂಬಂಧ ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಹಿಂಸಾಚಾರದ ಬಗ್ಗೆ ಆಡಳಿತಾರೂಢ ಟಿಎಂಸಿ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಮುಂದುವರೆದಿವೆ. ಪಶ್ಚಿಮ ಬಂಗಾಳದ ನಂತರ ನೆರೆಯ ಅಸ್ಸಾಂನಲ್ಲಿಯೂ ವಕ್ಪ್ ವಿರೋಧಿ ಹೋರಾಟಗಾರರು ಹಿಂಸಾಚಾರ ನಡೆಸಿದ್ದಾರೆ.