ಚಿತ್ರದುರ್ಗ: ವಿರಾಟ್ ಕೊಹ್ಲಿ ಕಟೌಟ್ ಗೆ ರಕ್ತಾಭಿಷೇಕ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಮೇ 3ರಂದು ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಗೆಲುವು ಸಾಧಿಸಿದ ವೇಳೆ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮೇಕೆ ಬಲಿ ನೀಡಿ ವಿಕೃತಿ ಮೆರೆದಿದ್ದ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನ ಮಾರಮ್ಮನಹಳ್ಳಿ ಗ್ರಾಮದ ಮೂವರ ವಿರುದ್ಧ ದೂರು ದಾಖಲಾಗಿದೆ.
ಮಾರಮ್ಮನಹಳ್ಳಿಯ ಸಣ್ಣಪಾಲಯ್ಯ, ಜಯಣ್ಣ, ತಿಪ್ಪೇಸ್ವಾಮಿ ಅವರ ವಿರುದ್ಧ ಪ್ರಾಣಿ ಬಲಿ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ. ಮೇ 4ರಂದು ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಕತ್ತರಿಸಿ ಯುವಕರು ರಕ್ತಾಭಿಷೇಕ ಮಾಡಿದ್ದರು. ಮೇಕೆಯನ್ನು ಮಚ್ಚಿನಿಂದ ಕತ್ತರಿಸಿ ಎತ್ತಿ ಹಿಡಿದು ಕೊಯ್ಲು ಭಾವಚಿತ್ರಕ್ಕೆ ರಕ್ತ ಚಿಮ್ಮಿಸುವ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಮೊಳಕಾಲ್ಮುರು ಠಾಣೆ ಪೋಲೀಸರು ಗ್ರಾಮಕ್ಕೆ ಭೇಟಿ ನೀಡಿ ಆರೋಪಿಗಳನ್ನು ಗುರುತಿಸಿ ಪ್ರಕರಣ ದಾಖಲಿಸಿದ್ದಾರೆ.