ರಾಯಪುರ: ಛತ್ತಿಸ್ಗಢದ ರಾಯಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ, ಶತಕ ಸಿಡಿಸಿದ್ದಾರೆ. ಇದು ಏಕದಿನ ಪಂದ್ಯದಲ್ಲಿ 53ನೇ ಶತಕವಾಗಿದೆ. ಟೆಸ್ಟ್ ನಲ್ಲಿ 30, ಅಂತರಾಷ್ಟ್ರೀಯ ಟಿ20ಯಲ್ಲಿ ಒಂದು ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 84ನೇ ಶತಕ ಬಾರಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಹ್ಯಾಟ್ರಿಕ್ ಶತಕ
ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹ್ಯಾಟ್ರಿಕ್ ಶತಕ ಸಿಡಿಸಿದ್ದಾರೆ. 2023 ರಲ್ಲಿ ವಿಶ್ವಕಪ್ ನಲ್ಲಿ ಕೊಲ್ಕತ್ತಾದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಅಜೇಯ 101 ರನ್ ಗಳಿಸಿದ್ದರು. ಈ ಬಾರಿ ಸರಣಿಯ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ 135 ಹಾಗೂ 102 ರನ್ ಗಳಿಸಿದ್ದು, ಇದು ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟಾರೆ 7ನೇ ಶತಕವಾಗಿದೆ.
ಭಾರತದಲ್ಲಿ 40ನೇ ಅಂತರರಾಷ್ಟ್ರೀಯ ಶತಕ
ವಿರಾಟ್ ಕೊಹ್ಲಿ ಭಾರತದಲ್ಲಿ ನಡೆದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 40ನೇ ಶತಕ ಬಾರಿಸಿದ್ದಾರೆ. ಇದರೊಂದಿಗೆ ತವರಿನಲ್ಲಿ ಗರಿಷ್ಠ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುವತ್ತ ದಾಪುಗಾಲು ಇಟ್ಟಿದ್ದಾರೆ. ಸಚಿನ್ ಭಾರತದಲ್ಲಿ 42 ಶತಕ ಸಿಡಿಸಿದ್ದಾರೆ.
ಸತತವಾಗಿ ಎರಡು ಶತಕ 11 ಬಾರಿ
ವಿರಾಟ್ ಕೊಹ್ಲಿ ಏಕದಿನದಲ್ಲಿ ಸತತವಾಗಿ ಎರಡು ಬಾರಿ ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಶತಕ ಸಿಡಿಸಿರುವುದು ಇದು 11ನೇ ಬಾರಿ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಆರು ಬಾರಿ ಈ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ.
4 ದೇಶಗಳ ವಿರುದ್ಧ ತಲಾ 7 ಸೆಂಚುರಿ
ವಿರಾಟ್ ಕೊಹ್ಲಿ ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ನಾಲ್ಕು ದೇಶಗಳ ವಿರುದ್ಧ ತಲಾ 7 ಅಥವಾ ಅದಕ್ಕಿಂತ ಹೆಚ್ಚು ಶತಕ ಸಿಡಿಸಿದ್ದಾರೆ. ಶ್ರೀಲಂಕಾ ವಿರುದ್ಧ 10, ವೆಸ್ಟ್ ಇಂಡೀಸ್ ವಿರುದ್ಧ 9, ಆಸ್ಟ್ರೇಲಿಯಾ ವಿರುದ್ಧ 8, ದಕ್ಷಿಣ ಆಫ್ರಿಕಾ ವಿರುದ್ಧ 7 ಶತಕ ಬಾರಿಸಿದ್ದಾರೆ. ಕೊಹ್ಲಿ ಹೊರತುಪಡಿಸಿದರೆ ಸಚಿನ್ ತೆಂಡೂಲ್ಕರ್ ಮಾತ್ರ ಒಂದಕ್ಕಿಂತ ಹೆಚ್ಚು ದೇಶಗಳ ವಿರುದ್ಧ 7ಕ್ಕಿಂತ ಹೆಚ್ಚು ಶತಕ ಸಿಡಿಸಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧ 9, ಶ್ರೀಲಂಕಾ ವಿರುದ್ಧ 8 ಬಾರಿ ಸೆಂಚುರಿ ಬಾರಿಸಿದ್ದಾರೆ.
