ಬೆಂಗಳೂರು: ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಮರಣೋತ್ತರ ಪರೀಕ್ಷಾ ವರದಿ ಬುಧವಾರ ಹೆಣ್ಣೂರು ಠಾಣೆ ಪೊಲೀಸರ ಕೈ ಸೇರಿದೆ. ಈ ವರದಿ ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬೆಂಗಳೂರಿನ ನಾಗವಾರದ ಖಾಸಗಿ ಕಂಪನಿಯೊಂದರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವಿನಯ್ ಏಪ್ರಿಲ್ 4ರಂದು ಕಚೇರಿಯ ಗೋದಾಮಿನಲ್ಲಿ ನೇಣು ಹಾಕಿಕೊಂಡಿದ್ದರು.
ಅವರು ಮೃತಪಟ್ಟ ನಿಖರವಾದ ಸಮಯ, ಮೃತ ದೇಹ ಯಾವ ಸ್ಥಿತಿಯಲ್ಲಿತ್ತು ಎಂಬುದನ್ನು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ವರದಿಯಲ್ಲಿ ಉಲ್ಲೇಖಿಸಿದ್ದು, ಈ ವರದಿಯನ್ನು ವಿಶ್ಲೇಷಿಸಲಾಗುತ್ತಿದೆ.
ವಿನಯ್ ಅವರ ಮೊಬೈಲ್, ಲ್ಯಾಪ್ಟಾಪ್, ಅವರು ಬರೆದಿದ್ದರೂ ಎನ್ನಲಾದ ಡೆತ್ ನೋಟನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಎರಡು ದಿನಗಳ ಒಳಗೆ ಎಫ್ಎಸ್ಎಲ್ ವರದಿ ಕೂಡ ಬರುವ ಸಾಧ್ಯತೆ ಇದ್ದು ,ತನಿಖೆಗೆ ಮತ್ತಷ್ಟು ವೇಗ ಸಿಗಲಿದೆ.
ವಿನಯ್ ಆತ್ಮಹತ್ಯೆ ಪ್ರಕರಣದಲ್ಲಿ ಕಿರುಕುಳ ನೀಡಿದ್ದ ಆರೋಪದ ಮೇಲೆ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ ಅವರ ವಿರುದ್ಧ ಕೇಸು ದಾಖಲಾಗಿದೆ.