ಬೆಂಗಳೂರು: ನನ್ನ ಮನೆ ಮೇಲೆ ಇಡಿ ದಾಳಿ ರಾಜಕೀಯ ಷಡ್ಯಂತ್ರ. ಯಾಅವೆಲ್ಲ ಕೇಸ್ ಹಾಕಬೇಕೋ ಅವೆಲ್ಲವನ್ನೂ ಹಾಕಿದ್ದಾರೆ ಎಂದು ಶಾಸಕ ವಿನಯ್ ಕುಲಕರಣಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಕುಲಕರಣಿ, ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಯಾವೆಲ್ಲ ಕೇಸ್ ಹಾಕಬೇಕೋ ಅದೆಲ್ಲಾ ಕೇಸ್ ಹಾಕಿದ್ದಾರೆ. ನಾನು ರೈತ, ಯಾವುದೇ ವ್ಯವಹಾರ ಮಾಡಿಲ್ಲ. ಮನೆಯಲ್ಲಿ ದಾಖಲೆ ಪರಿಶೀಲನೆ ವೇಳೆ ಇಡಿಗೆ ಏನೂ ಸಿಕ್ಕಿಲ್ಲ. ಹೈಕೋರ್ಟ್ ನಲ್ಲಿ ನಾನು ಸಾಕ್ಷಿಯಾಗಿದ್ದೇನೆ. ಕೆಲವು ಕೇಸ್ ಗೆ ಅಡ್ಡಿಪಡಿಸಲು ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದರು.
ಕಾಲಿಗೆ ಬಿದ್ದು ಇಡಿ ಅಧಿಕಾರಿಗಳ ಜೊತೆ ಹೋಗೋದು ಬಾಕಿ ಇದೆ. ಕಳೆದ ಒಂದು ತಿಂಗಳಿಂದ ನನಗೆ ಕಿರುಕುಳ ನೀಡುತ್ತಿದ್ದಾರೆ. ಶಾಸಕನಾಗಿ ನನಗೆ ನನ್ನ ಕ್ಷೇತ್ರಕ್ಕೆ ಹೋಗಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯಾಅರೇ ಆಗಲಿ ಜನರಿಗೆ ಮೋಸ್ ಮಾಡುವುದು ಸರಿಯಲ್ಲ. ಐಶ್ವರ್ಯ ಗೌಡ ಖಾತೆಗೆ ಹಣ ವರ್ಗಾವಣೆಯಾಗಿದ್ದರೆ ಸಿಕ್ಕೇ ಸಿಗುತ್ತದೆ. ಪ್ರತಿಯೊಂದಕ್ಕೂ ನಾನೇ ಟಾರ್ಗೆಟ್ ಆಗಿದ್ದೇನೆ. ಕಿರುಕುಳಕ್ಕೂ ಒಂದು ಮಿತಿ ಇರುತ್ತದೆ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಹೇಳಿದರು.