ಬೆಂಗಳೂರು: ಇತ್ತೀಚೆಗೆ ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆ ಮರು ಪರೀಕ್ಷೆ ಎರಡು ಪತ್ರಿಕೆಗಳಲ್ಲಿ ದೋಷಗಳಿರುವ ಕಾರಣ ಮತ್ತೊಮ್ಮೆ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿಜಯೇಂದ್ರ ಪತ್ರ ಬರೆದಿದ್ದು, 79 ದೋಷಗಳಿದ್ದರೂ ಕೇವಲ 5 ಪ್ರಶ್ನೆಗಳಿಗೆ ಕೃಪಾಂಕ ನೀಡಿ ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ. ಹಿಂದೆ ಸದನದಲ್ಲಿ ಕೋರ್ಟ್ ತೀರ್ಪಿನ ಬಳಿಕ ಅನ್ಯಾಯ ಸರಿಪಡಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಹೇಳಿದಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ ಬಹುತೇಕ ಪರೀಕ್ಷೆಗಳಲ್ಲಿ ಗೊಂದಲ, ಲೋಪಗಳು, ಭಾಷಾಂತರ ದೋಷ ಪುನರಾವರ್ತನೆ. ಸಮರ್ಪಕವಾಗಿ ಭಾಷಾಂತರಿಸದೆ ಆಕ್ರೋಶಕ್ಕೆ ಕಾರಣವಾಗಿತ್ತು. ಪರೀಕ್ಷಾರ್ಥಿಗಳನ್ನು ಗೊಂದಲಕ್ಕೆ ದೂಡುತ್ತಿರುವ ಆಯೋಗದ ನಡೆ ಕ್ಷಮೆಗೆ ಅರ್ಹವಲ್ಲ. ಕೆಪಿಎಸ್ಸಿ ವೈಫಲ್ಯ ಮತ್ತು ಸರ್ಕಾರದ ಅಸಮರ್ಥ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯ 34 ಅಭ್ಯರ್ಥಿಗಳಿಗೆ ಮರು ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಿದೆ. ಆದರೆ, ಉಳಿದ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿ ಎಲ್ಲಾ ಅಭ್ಯರ್ಥಿಗಳಿಗೂ ಮರು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದು ನ್ಯಾಯೋಚಿತ ಕ್ರಮವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ತಮ್ಮ ಭವಿಷ್ಯದ ಕನಸು ಮತ್ತು ಪರೀಕ್ಷೆ ಎದುರಿಸುವ ಅವಕಾಶಕ್ಕಾಗಿ ಪರಿತಪಿಸುತ್ತಿರುವ ಯುವ ಜನರ ನಿರೀಕ್ಷೆ ಹುಸಿಗೊಳಿಸುವುದಿಲ್ಲ ಎಂದು ನಂಬಿರುತ್ತೇನೆ ಎಂದು ವಿಜಯೇಂದ್ರ ಪತ್ರದಲ್ಲಿ ತಿಳಿಸಿದ್ದಾರೆ.