ಮುಂಬೈ: ಮೊದಲೆಲ್ಲಾ ಕೈಯಲ್ಲಿ ನಗದು ಇಲ್ಲಾಂದ್ರೆ ಬ್ಯಾಂಕ್ ಅಥವಾ ಎಟಿಎಂಗೆ ಓಡಬೇಕಿತ್ತು. ಆದರೀಗ ಮೊಬೈಲ್ ಮೂಲಕವೇ ತಕ್ಷಣದ ಹಣ ವರ್ಗಾವಣೆ ಮಾಡಬಹುದು. ಯುಪಿಐ ಬಳಸಿ ಯಾರಿಂದ ಯಾರಿಗೆ ಬೇಕಾದ್ರೂ ಹಣ ವರ್ಗಾವಣೆ ಮಾಡಬಹುದು. ಇದೀಗ ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆಯನ್ನು ನೀಡುವ ಕ್ರಾಂತಿಕಾರಿ ಯುಪಿಐ ಎಟಿಎಂ ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಭಾರತದ ಮೊದಲ ಯುಪಿಐ ಎಟಿಎಂ ಎಂದು ಹೆಸರಿಸಲಾದ ಈ ಹೊಸ ವೈಶಿಷ್ಟ್ಯಕ್ಕೆ ಇಂಟರ್ನೆಟ್ ಬಳಕೆದಾರರು ಗೇಮ್ ಚೇಂಜರ್ ಎಂದು ಕರೆದಿದ್ದಾರೆ.
ಫಿನ್‌ಟೆಕ್ ಪ್ರಭಾವಿ ರವಿಸುತಂಜನಿ ಎಂಬುವವರು ಯುಪಿಐ ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯುವುದು ಹೇಗೆ ಎಂಬುದನ್ನು ತೋರಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಹಣ ಹಿಂಪಡೆಯುವುದು ಸಾಮಾನ್ಯ, ಆದರೆ, ಈ ವಿಶಿಷ್ಟವಾದ ಎಟಿಎಂ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ್ದು, ಎನ್‌ಸಿಆರ್ ಕಾರ್ಪೊರೇಶನ್‌ನಿಂದ ನಡೆಸಲ್ಪಡುತ್ತದೆ.
ವಿಡಿಯೋದಲ್ಲಿ, ರವಿಸುತಂಜನಿಯು ಪರದೆಯ ಮೇಲೆ ಪ್ರದರ್ಶಿಸಲಾದ ಯುಪಿಐ ಕಾರ್ಡ್‌ಲೆಸ್ ನಗದು ಆಯ್ಕೆಯ ಮೇಲೆ ಮೊದಲು ಕ್ಲಿಕ್ ಮಾಡುತ್ತಾರೆ. ನಂತರ ತಾವು ಅಂದುಕೊಂಡ ಮೊತ್ತವನ್ನು ನಮೂದಿಸಲು ಮುಂದಾಗುತ್ತಾರೆ. ಮೊತ್ತವನ್ನು ನಮೂದಿಸಿದ ನಂತರ, ಎಟಿಎಂ ಪರದೆಯ ಮೇಲೆ ಕ್ಯೂಆರ್ ಕೋಡ್ ಕಾಣಿಸಿಕೊಳ್ಳುತ್ತದೆ. ನಂತರ ಅವರು ಭಿಮ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಾರೆ. ನಂತರ ಅವರ ಯುಪಿಐ ಪಿನ್ ಅನ್ನು ನಮೂದಿಸುತ್ತಾರೆ. ಬಳಿಕ ಎಟಿಎಂ ನಿಂದ ಹಣ ಹಿಂಪಡೆಯುತ್ತಾರೆ.
ವಿಡಿಯೋವನ್ನು ಹಂಚಿಕೊಂಡ ಅವರು, ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಯುಪಿಐ ಬಳಸಿಕೊಂಡು ನಗದು ಹಿಂತೆಗೆದುಕೊಳ್ಳುವಿಕೆಯನ್ನು ಮಾಡಿದ್ದೇನೆ ಎಂದು ಶೀರ್ಷಿಕೆ ನೀಡಿದ್ದಾರೆ. ಸದ್ಯ, ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಯುಪಿಐ ಎಟಿಎಂ ಕೇವಲ ಸಾಮಾನ್ಯ ಎಟಿಎಂ ಆಗಿ ಕಾರ್ಯನಿರ್ವಹಿಸುತ್ತದೆ. ಹೊಸ ಯುಪಿಐ ಎಟಿಎಂ ಪ್ರಸ್ತುತ ಭಿಮ್ ಯುಪಿಐ ಅಪ್ಲಿಕೇಶನ್‌ನಲ್ಲಿ ಬೆಂಬಲಿತವಾಗಿದೆ. ಆದರೆ, ಇದು ಶೀಘ್ರದಲ್ಲೇ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ನಂತಹ ಇತರ ಅಪ್ಲಿಕೇಶನ್‌ಗಳಲ್ಲೂ ಬರಲಿವೆ. ಈ ತಂತ್ರಜ್ಞಾನವನ್ನು ಇನ್ನೂ ಸಾರ್ವಜನಿಕವಾಗಿ ನಿಯೋಜಿಸಲಾಗಿಲ್ಲ. ಆದರೆ, ಹಂತಗಳಲ್ಲಿ ಹೊರತರಲಾಗುತ್ತಿದೆ. ನಾವು ಆರ್ಥಿಕ ತಂತ್ರಜ್ಞಾನಗಳಲ್ಲಿ ಎಷ್ಟು ದೂರ ಬಂದಿದ್ದೇವೆ ಎಂದು ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
https://twitter.com/Ravisutanjani/status/1699066810556096695?ref_src=twsrc%5Etfw%7Ctwcamp%5Etweetembed%7Ctwterm%5E1699066810556096695%7Ctwgr%5E5ff9de4c7484cf8ea02d483096bfe9790f6d9af1%7Ctwcon%5Es1_&ref_url=https%3A%2F%2Fwww.ndtv.com%2Ffeature%2Fgame-changer-video-shows-man-withdrawing-cash-from-an-atm-using-upi-4367024