ಭಾರಿ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿಯಿಂದಾಗಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐ) ಟರ್ಮಿನಲ್ 1ರ ಆಗಮನ ವಿಭಾಗದ ಹೊರಭಾಗದ ಶೇಡ್ ಭಾನುವಾರ ಮುಂಜಾನೆ ಕುಸಿದು ಬಿದ್ದಿದೆ. ಈ ಘಟನೆಯಿಂದಾಗಿ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, 49 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.
ಶೇಡ್ ಕುಸಿದ ಪರಿಣಾಮವಾಗಿ, ಹೊರ ಆವರಣದ ಒಂದು ದೊಡ್ಡ ಭಾಗವು ಪಾದಚಾರಿ ಮಾರ್ಗದ ಮೇಲೆ ಬಿದ್ದಿದ್ದು, ನೀರು ಎಲ್ಲೆಂದರಲ್ಲಿ ತುಂಬಿ ಹರಿಯುತ್ತಿತ್ತು. ತಕ್ಷಣವೇ ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು.
ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಮೇ 24ರ ಮಧ್ಯರಾತ್ರಿ ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ, ಸುಮಾರು 2:00 ಗಂಟೆಯ ಸುಮಾರಿಗೆ 30 ರಿಂದ 45 ನಿಮಿಷಗಳಲ್ಲಿ ಗಂಟೆಗೆ 70-80 ಕಿ.ಮೀ. ವೇಗದಲ್ಲಿ ಗಾಳಿ ಸಹಿತ 80 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. “ಈ ಅನಿರೀಕ್ಷಿತ ಮತ್ತು ಕೇಂದ್ರೀಕೃತ ಮಳೆಯು ಐಜಿಐ ವಿಮಾನ ನಿಲ್ದಾಣದ ಸುತ್ತ ತಾತ್ಕಾಲಿಕ ಜಲಾವೃತಕ್ಕೆ ಕಾರಣವಾಯಿತು, ಇದರಿಂದ ಕಾರ್ಯಾಚರಣೆಗೆ ಅಲ್ಪಾವಧಿ ಪರಿಣಾಮ ಬೀರಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕುಸಿದ ಶೇಡ್ ಬಗ್ಗೆ ಸ್ಪಷ್ಟನೆ ನೀಡಿರುವ ವಿಮಾನ ನಿಲ್ದಾಣ, “ತೀವ್ರ ಹವಾಮಾನ ಪರಿಸ್ಥಿತಿಗಳಿಗೆ ವಿನ್ಯಾಸದ ನೈಸರ್ಗಿಕ ಪ್ರತಿಕ್ರಿಯೆಯ ಭಾಗವಾಗಿ ಮತ್ತು ಅತಿಯಾದ ನೀರು ನಿಲ್ಲುವುದನ್ನು ತಡೆಯಲು, ಟರ್ಮಿನಲ್ 1ರ ಆಗಮನದ ಮುಂದಿರುವ ಹೊರಗಿನ ಟೆನ್ಸೈಲ್ ಫ್ಯಾಬ್ರಿಕ್‌ನ ಒಂದು ಭಾಗವು ಒತ್ತಡಕ್ಕೆ ಒಳಗಾಗಿ ಹೊಂದಾಣಿಕೆ ಮಾಡಿಕೊಂಡಿದೆ, ಇದರಿಂದ ನೀರು ಚೆಲ್ಲಾಪಿಲ್ಲಿಯಾಗಲು ಸಹಾಯವಾಗಿದೆ. ರಚನಾತ್ಮಕವಾಗಿ ಯಾವುದೇ ಹಾನಿಯಾಗಿಲ್ಲ ಅಥವಾ ಟರ್ಮಿನಲ್‌ನ ಇತರೆ ಭಾಗಗಳಿಗೆ ಯಾವುದೇ ಪರಿಣಾಮವಾಗಿಲ್ಲ” ಎಂದು ಸ್ಪಷ್ಟಪಡಿಸಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಶನಿವಾರ ರಾತ್ರಿ 11.30 ರಿಂದ ಭಾನುವಾರ ಮುಂಜಾನೆ 5.30ರ ನಡುವೆ ಆರು ಗಂಟೆಗಳಲ್ಲಿ ನಗರದಲ್ಲಿ 82 ಕಿ.ಮೀ. ವೇಗದ ಗಾಳಿ ಮತ್ತು 81.2 ಮಿ.ಮೀ. ಮಳೆ ದಾಖಲಾಗಿದೆ.
ವಿಮಾನ ನಿಲ್ದಾಣದ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಘಟನೆಯಿಂದಾಗಿ 17 ಅಂತರಾಷ್ಟ್ರೀಯ ವಿಮಾನಗಳು ಸೇರಿದಂತೆ ಒಟ್ಟು 49 ವಿಮಾನಗಳನ್ನು ಬೇರೆ ನಿಲ್ದಾಣಗಳಿಗೆ ತಿರುಗಿಸಲಾಯಿತು.
ನಗರದ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ತೀವ್ರ ಜಲಾವೃತ ಉಂಟಾಗಿದೆ. ಮಿಂಟೋ ರೋಡ್‌ನಲ್ಲಿ ಕಾರೊಂದು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದ ದೃಶ್ಯಗಳು ಕಂಡುಬಂದಿವೆ. ಇದರಿಂದಾಗಿ ಸಂಚಾರ ದಟ್ಟಣೆ ಮತ್ತು ವಾಹನಗಳ ನಿಧಾನ ಚಲನೆ ಕೂಡ ವರದಿಯಾಗಿದೆ.
ಬುಧವಾರದಂದು ಉತ್ತರ ದೆಹಲಿಯಲ್ಲಿ ಪ್ರವೇಶಿಸಿದ್ದ ಮೋಡದ ರಾಶಿಯಿಂದಾಗಿ ಧೂಳಿನ ಬಿರುಗಾಳಿ ಮತ್ತು ಪ್ರಬಲ ಗಾಳಿ ಬೀಸಿತ್ತು. ಆ ಸಂದರ್ಭದಲ್ಲಿ ಗಂಟೆಗೆ 50-60 ಕಿ.ಮೀ. ವೇಗದಲ್ಲಿ ಗಾಳಿ ಬೀಸಿ, 70 ಕಿ.ಮೀ.ವರೆಗೆ ಏರಿತ್ತು. ಇದರೊಂದಿಗೆ ಲಘು ಮಳೆಯೂ ಸಹ ಆಗಿತ್ತು. ಈ ತೀವ್ರ ಧೂಳಿನ ಬಿರುಗಾಳಿ, ಗುಡುಗು, ಆಲಿಕಲ್ಲು ಮಳೆಯ ನಂತರ ದೆಹಲಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವೂ ಸಹ ವರದಿಯಾಗಿತ್ತು.