BIG NEWS: ವಾಹನ ಎಫ್.ಸಿ., ಲೈಸೆನ್ಸ್ ಇಲ್ಲದಿದ್ದರೂ ಪರಿಹಾರ ನೀಡಬೇಕು: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಅಪಘಾತದ ಸಂದರ್ಭದಲ್ಲಿ ವಾಹನಕ್ಕೆ ಪರವಾನಿಗೆ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೂ ವಿಮಾ ಕಂಪನಿ ಅಪಘಾತದ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಪರಿಹಾರದ ಮೊತ್ತವನ್ನು ನಂತರ ವಾಹನ ಮಾಲೀಕರಿಂದ ವಿಮಾ ಕಂಪನಿ ವಸೂಲಿ ಮಾಡಿಕೊಳ್ಳಬಹುದು ಎಂದು ಹೈಕೋರ್ಟ್ ತಿಳಿಸಿದೆ. ಅಪಘಾತಕ್ಕೆ ಒಳಗಾದ ವಾಹನಕ್ಕೆ ಎಫ್ಸಿ ಇಲ್ಲದಿದ್ದರೂ ಪರಿಹಾರಕ್ಕೆ ಸೂಚಿಸಿದ್ದ ಆದೇಶ ಪ್ರಶ್ನಿಸಿ ಶ್ರೀರಾಮ ಜನರಲ್ ಇನ್ಸೂರೆನ್ಸ್ ಕಂಪನಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ.

ವಾಹನ ಮಾಲೀಕರು ತನ್ನ ವಾಹನವನ್ನು ರಸ್ತೆಗೆ ಇಳಿಸುವ ಸಂದರ್ಭದಲ್ಲಿ ಪರವಾನಿಗೆ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿಲ್ಲ. ಇದು ವಾಹನ ಮಾಲೀಕರ ಮೂಲಭೂತ ಉಲ್ಲಂಘನೆಯಾಗಿದೆ. ಇಲ್ಲಿ ವಾಹನ ಮಾಲೀಕರ ತಪ್ಪು ಕೂಡ ಇದೆ. ಹೀಗಾಗಿ ವಿಮೆ ಕಂಪನಿಗಳ ಸಂಪೂರ್ಣ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು. ಮಾಲೀಕರೇ ಪಾವತಿ ಮಾಡಬೇಕು ಎಂಬ ವಿಮಾ ಕಂಪನಿಯ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಪೂರ್ಣ ಪೀಠದ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಸ್ವರ್ಣ ಸಿಂಗ್  ಮತ್ತು ಯಲ್ಲವ್ವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿರುವಂತೆ ಇದೊಂದು ಮೂಲಭೂತ ಉಲ್ಲಂಘನೆಯಾಗಿದ್ದರೂ ವಿಮೆ ಕಂಪನಿ ತನ್ನ ಹೊಣೆಯಿಂದ ನುಣುಚಿಕೊಳ್ಳಲು ಅವಕಾಶ ಇರುವುದಿಲ್ಲ. 8 ವಾರದಲ್ಲಿ ಪರಿಹಾರ ಮೊತ್ತವನ್ನು ಸಂತ್ರಸ್ತರ ಖಾತೆಗೆ ಪಾವತಿಸಬೇಕು. ನಂತರ ವಾಹನ ಮಾಲೀಕರಿಂದ ವಸೂಲಿ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಎರಡೂ ಮೇಲ್ಮನವಿ ಅರ್ಜಿಗಳನ್ನು ಭಾಗಶಃ ಪುರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠ ಪರಿಹಾರ 13.44 ಲಕ್ಷ ರೂ.ಗಳನ್ನು 17.88 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿದ್ದು, ಶೇಕಡ 9 ರಷ್ಟು ವಾರ್ಷಿಕ ಬಡ್ಡಿ ಸೇರಿಸಿ ಪಾವತಿಸಲು ಆದೇಶ ನೀಡಿದೆ.

ಹೊಸಕೋಟೆ- ಚಿಕ್ಕ ತಿರುಪತಿ ರಸ್ತೆಯಲ್ಲಿ ಬೈಸಿಕಲ್ ನಲ್ಲಿ ತೆರಳುತ್ತಿದ್ದ ನಂದೀಶಪ್ಪ ಎಂಬುವರಿಗೆ ಸರಕು ವಾಹನ ಡಿಕ್ಕಿ ಹೊಡೆದು ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಕರಣ 13.44 ಲಕ್ಷ ರೂ. ಪರಿಹಾರ ನೀಡಲು ಆದೇಶ ನೀಡಿದ್ದು, ಪರಿಹಾರ ಮೊತ್ತ ಹೆಚ್ಚಳ ಮಾಡುವಂತೆ ನಂದೀಶಪ್ಪ ಪತ್ನಿ ಮತ್ತು ನ್ಯಾಯಾಧೀಕರಣ ಆದೇಶ ರದ್ದು ಮಾಡುವಂತೆ ಕೋರಿ ವಿಮಾ ಕಂಪನಿಗಳಿಂದ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read