ದೇಶದ ಮೊದಲ ‘ವಂದೇ ಭಾರತ್’ ಸ್ಲೀಪರ್ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ತಯಾರಾಗಿರುವ ಮೊದಲ ‘ವಂದೇ ಭಾರತ್’ ಸ್ಲೀಪರ್ ರೈಲನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಅನಾವರಣಗೊಳಿಸಿದ್ದು, ಮುಂದಿನ ಮೂರು ತಿಂಗಳ ಒಳಗೆ ಇದರ ಸಂಚಾರ ಆರಂಭವಾಗಲಿದೆ.
ಇದಕ್ಕೂ ಮುನ್ನ ಹತ್ತು ದಿನಗಳ ಕಾಲ ಈ ರೈಲಿನ ತಾಂತ್ರಿಕ ಪರೀಕ್ಷೆ ಜೊತೆಗೆ ವಿವಿಧ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದ್ದು, ಇದು ಪೂರ್ಣಗೊಂಡ ಬಳಿಕ ಪ್ರಯಾಣಿಕರ ಸಂಚಾರಕ್ಕೆ ‘ವಂದೇ ಭಾರತ್’ ಸ್ಲೀಪರ್ ರೈಲು ಹಳಿಗಿಳಿಯಲಿದೆ. ಈ ರೈಲು ಪ್ರಯಾಣಕ್ಕೆ ಸಂಪೂರ್ಣವಾಗಿ ಸಜ್ಜಾದ ಬಳಿಕ ಮುಂದಿನ ಹಂತದ ರೈಲುಗಳನ್ನು ಒಂದೂವರೆ ವರ್ಷಗಳಲ್ಲಿ ತಯಾರಿಸಲಾಗುತ್ತದೆ.
ಇನ್ನು ಹಳಿಗೆ ಇಳಿಯಲಿರುವ ‘ವಂದೇ ಭಾರತ್’ ಸ್ಲೀಪರ್ ರೈಲು ಹಲವು ವಿಶೇಷತೆಗಳಿಂದ ಕೂಡಿದ್ದು, ನಿದ್ರಿಸಲು ಆರಾಮದಾಯಕ ಮಂಚ, ಆಕರ್ಷಕ ಒಳಾಂಗಣ ವಿನ್ಯಾಸ ಇರಲಿದೆ. ಈ ರೈಲಿನಲ್ಲಿ ಅಗ್ನಿ ಅಪಾಯದ ಮಟ್ಟ ಅತಿ ಕಡಿಮೆ ಇರಲಿದ್ದು, ಅಂಗವಿಕಲರಿಗೆ ವಿಶೇಷ ಆಸನ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲದೆ ಸ್ವಯಂ ಚಾಲಿತ ಬಾಗಿಲುಗಳು ಇರಲಿವೆ.
ಬೋಗಿಗಳ ಮಧ್ಯೆ ಸೆನ್ಸರ್ ಆಧಾರಿತ ಬಾಗಿಲುಗಳು ಇರಲಿದ್ದು, 1 ನೇ ಎಸಿ ಚೇರ್ ಕಾರ್ ನಲ್ಲಿ ಪ್ರಯಾಣಿಸುವವರಿಗೆ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಲಭ್ಯವಿರಲಿದೆ. ಇನ್ನು ಶೌಚಾಲಯ ವಾಸನೆ ಮುಕ್ತವಾಗಿರಲಿದ್ದು ಯು ಎಸ್ ಬಿ ಚಾರ್ಜಿಂಗ್, ರೀಡಿಂಗ್ ಲೈಟ್ ಜೊತೆಗೆ ಸಾರ್ವಜನಿಕ ಪ್ರಕಟಣೆ ಮತ್ತು ದೃಶ್ಯ ಮಾಹಿತಿ ವ್ಯವಸ್ಥೆ ಹಾಗೂ ವಿಶಾಲವಾದ ಲಗೇಜ್ ಕೊಠಡಿ ಇರಲಿದೆ. ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಒಟ್ಟು 16 ಬೋಗಿಗಳು ಇರಲಿದ್ದು, ಈ ಪೈಕಿ 611 ಆಸನ ಸಾಮರ್ಥ್ಯದ 11 ಎಸಿ 3 ಟೈಯರ್, 188 ಆಸನ ಸಾಮರ್ಥ್ಯದ 4 ಎಸಿ ಟು ಟೈರ್ ಹಾಗೂ 24 ಆಸನ ಸಾಮರ್ಥ್ಯದ 1 ಮೊದಲ ದರ್ಜೆ ಎಸಿ ಕಂಪಾರ್ಟ್ಮೆಂಟ್ ಇರಲಿದೆ. ಒಟ್ಟು ಆಸನಗಳ ಸಂಖ್ಯೆ 823.