ಡೆಹ್ರಾಡೂನ್: ಉತ್ತರಾಖಂಡದ ಶಾಲೆಯೊಂದರ ಬಳಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ. ಇಲ್ಲಿನ ಅಲ್ಮೋರಾದ ದಬಾರಾ ಗ್ರಾಮದ ಶಾಲೆಯ ಬಳಿ ಪೊದೆಯೊಂದರಲ್ಲಿ ಸ್ಫೋಟಕಗಳು ಪತ್ತೆಯಾಗಿವೆ.
ಶಾಲೆಯ ಪ್ರಾಂಶುಪಾಲರು ಮೊದಲು ಇದನ್ನು ಗಮನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪ್ಯಾಕೇಟ್ ಗಳಲ್ಲಿ 20 ಕೆಜಿಗಿಂತ ಅಧಿಕ ತೂಕದ 161 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಸ್ಫೋಟಕಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿದೆ. ಸುತಮುತ್ತಲ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಯಾವ ಕಾರಣಕ್ಕೆ ಈ ಸ್ಫೋಟಕಗಳನ್ನು ತರಲಾಗಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇತ್ತೀಚೆಗೆ ಹರಿಯಾಣದಲ್ಲಿ ಸುಮಾರು 3000 ಕೆಜಿ ಸ್ಫೋಟಕಗಳು ಪತ್ತೆಯಾಗಿದ್ದವು.
