ಡೆಹ್ರಾಡೂನ್: ಉತ್ತರಕಾಶಿಯಲ್ಲಿ ಮೇಘಸ್ಫೋಟದಿಂದ ವಿವಿಧೆಡೆ ಸಂಭವಿಸಿರುವ ಹಠಾತ್ ಪ್ರವಾಹದಿಂದ ಸಂಭವಿಸಿರುವ ದುರಂತಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇಂದು 80 ಜನರನ್ನು ರಕ್ಷಿಸಲಾಗಿದೆ.
ಇಂದು ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಚಿನೂಕ್ ಹಾಗೂ ಎಂಐ-17 ಹೆಲಿಕಾಪ್ಟರ್ ಗಳನ್ನು ಬಳಸಿ 80 ಜನರನ್ನು ರಕ್ಷಿಸಲಾಗಿದೆ. ಅವರನ್ನು ಐಟಿಬಿಪಿಯ ಮಾಟ್ಲಿ ಹೆಲಿಪ್ಯಾಡ್ ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರಕಾಶಿ ಮೇಘಸ್ಫೋಟ ಘಟನೆಗೆ ಸಂಬಂಧಿಸಿದಂತೆ ಈವರೆಗೆ 354 ಜನರನ್ನು ರಕ್ಷಿಸಲಾಗಿದೆ. 9 ಜನರು ಯೋಧರು, 60 ಜನರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಧರಾಲಿ, ಮುಖ್ಬಾ ಗ್ರಾಮಗಳಲ್ಲಿ ನಾಪತ್ತೆಯಾದವರ ಶೋಧಕ್ಕೆ ಅಗತ್ಯವಿರುವ ಅತ್ಯಾಧುನಿಕ ಯಂತ್ರೋಪಕರಣಗಳನ್ನು ವಾಯುಪಡೆ ವಿಮಾನ ಹಾಗೂ ಹೆಲಿಕಾಪ್ಟರ್ ಗಳ ಮೂಲಕ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.