ಕಾರವಾರ: ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ನದಿ, ಹಳ್ಳ-ಕೊಳ್ಳ, ಜಲಪಾತಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿವೆ. ಪ್ರವಾಸಿ ತಾಣ, ಜಲಪಾತಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದರೂ ದುಮ್ಮಿಕ್ಕಿ ಹರಿಯುವ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರು ತೆರಳಿ ಅಪಾಯಕ್ಕೆ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಮಳೆಗಾಲ ಆರಂಭವಾಯಿತೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಸಣ್ಣ ಸಣ್ಣ ಫಾಲ್ಸ್ ಗಳು, ತೊರೆಗಳು ಸೃಷ್ಟಿಯಾಗುತ್ತವೆ. ಇನ್ನು ವರುಣಾರ್ಭಟ ಆರಂಭವಾದರಂತೂ ಜಲಪಾತಗಳು ಬೋರ್ಗರೆದು ಹರಿಯಲಾರಂಭಸುತ್ತವೆ. ನದಿಗಳು ಪ್ರವಾಹದಂತೆ ಅಬ್ಬರಿಸಲಾರಂಭಿಸುತ್ತವೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ಭಾಗದಲ್ಲಿನ ಜಲಪಾತ ವೀಕ್ಷಣೆಗೆಂದು ಹೋದ ಪ್ರವಾಸಿಗರು ಪ್ರವಾಹದ ಅಬ್ಬರಕ್ಕೆ ಬೆಟ್ಟದ ನಡುವೆ ಸಿಲುಕಿಕೊಂಡು ಪರದಾಡಿದ ಘಟನೆ ನಡೆದಿದೆ.
ಹುಬ್ಬಳ್ಳಿಯ ಮೆಡಿಕಲ್ ಕಾಲೇಜಿನ ಐವರು ವಿದ್ಯಾರ್ಥಿಗಳು ಅರಬೈಲ್ ಘಟ್ಟದ ಕಾಡಿನ ಮಧ್ಯೆ ಇರುವ ಜಲಪಾತ ವೀಕ್ಷಣೆಗೆ ಹೋಗಿದ್ದರು. ಈ ವೇಳೆ ಭಾರಿ ಮಳೆಯಿಂದಾಗಿ ಏಕಾಏಕಿ ಜಲಪಾತದಲ್ಲಿ ನೀರಿನ ಅಬ್ಬರ ಜೋರಾಗಿದ್ದು, ಜಲಪಾತ ರೌದ್ರಾವತಾರ ತಾಳಿ ಧುಮ್ಮಿಕ್ಕಿ ಹರಿಯಲಾರಂಭಿಸಿದೆ. ಹಳ್ಳದ ಮಧ್ಯೆ ಸಿಲುಕಿಕೊಂಡ ಪ್ರವಾಸಿಗರು ಜೀವ ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ಕಲ್ಲುಗಳ ಮೇಲೆ, ಮರಗಳ ಮೇಲೆ ಕುಳಿತು ಮೂವರು ಬಚಾವ್ ಆಗಿದ್ದಾರೆ. ಮಳೆ ಅಬ್ಬರ ಕಡಿಮೆಯಾಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು, ಪೊಲೀಸರು ಸ್ಥಳಕ್ಕಾಗಮಿಸಿ ಮೂವರನ್ನು ರಕ್ಷಿಸಿದ್ದಾರೆ.