ಅದ್ದೂರಿಯಾಗಿ ಮದುವೆಯಾಗಿದ್ದ ವಧು-ವರರು ನವಜೀವನದ ಕನಸಿನೊಂದಿಗೆ ಕುಟುಂಬದವರ ಜೊತೆ ವಿವಾಹದ ಸಂಭ್ರಮದಲ್ಲಿರುವಾಗಲೇ ವಿಧಿಯಾಟ ವರನನ್ನೇ ಬಲಿ ಪಡೆದಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಸತೀಶ್ ಹಾಗೂ ಸ್ವಾತಿ ಎಂಬುವವರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಕೇವಲ 12 ಗಂಟೆಯಾಗಿತ್ತು. ಕಲ್ಯಾಣ ಮಂಟಪದಲ್ಲಿ ಮದುವೆ ಮುಗಿಸಿಕೊಂಡು ಮನೆಗೆ ವಾಪಾಸ್ ಆಗಿದ್ದರು. ಕುಟುಂಬದವರ ಜೊತೆ ಸೇರಿ ಭರ್ಜರಿ ಭೋಜನ ಸವಿದು ಬಳಿಕ ಸಿಹಿ ತಿನಿಸು ತರಲೆಂದು ವರ ಹೊರ ಹೋದವನು ವಾಪಾಸ್ ಬಂದಿಲ್ಲ.
ಊಟದ ಬಳಿಕ ಸಿಹಿ ತಿನಿಸು ತರಲೆಂದು ವರ ಸತೀಶ್ ತನ್ನ ಮೂವರು ಸ್ನೇಹಿತರೊಂದಿಗೆ ಕಾರಿನಲ್ಲಿ ಸಿಟಿಗೆ ಹೋಗಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದು, ಸ್ಥಳದಲ್ಲೇ ಸತೀಶ್ ಸಾವನ್ನಪ್ಪಿದ್ದಾನೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮದುವೆಯಾದ ಒಂದೇ ದಿನಕ್ಕೆ ಪತಿಯನ್ನು ಕಳೆದುಕೊಂಡ ಸ್ವಾತಿ ಬಾಳಲ್ಲಿ ಕತ್ತಲು ಆವರಿಸಿದೆ. ಪತಿ ಸಾವಿನ ಸುದ್ದಿಕೇಳಿ ಆಘಾತಗೊಂಡ ಸ್ವಾತಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಮದು ಮಗ ಸತೀಶ್ ನೇ ಕಾರು ಚಾಲಾಯಿಸುತ್ತಿದ್ದ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣವಾಗಿದ್ದು, ಸ್ಥಳದಲ್ಲೇ ಸತೀಶ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿಇ ನೀಡಿದ್ದಾರೆ.