ಬಾರಾಬಂಕಿ(ಉತ್ತರ ಪ್ರದೇಶ): ಬಾರಾಬಂಕಿ ಜಿಲ್ಲೆಯಲ್ಲಿ ಮಳೆಯ ಅಬ್ಬರದಿಂದ ಅಪಘಾತ ಸಂಭವಿಸಿದೆ. ಶುಕ್ರವಾರ ಬಾರಾಬಂಕಿ-ಹೈದರ್ ಘರ್ ರಸ್ತೆಯ ಹರಾಖ್ ಬಳಿಯ ರಾಜಬಜಾರ್ ನಲ್ಲಿ ಭಾರೀ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಮಾರ್ಗದ ಬಸ್ ಮೇಲೆ ಹಠಾತ್ತನೆ ಬಿದ್ದು ಕನಿಷ್ಠ ಐದು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ನಲ್ಲಿ ಸುಮಾರು 60 ಪ್ರಯಾಣಿಕರಿದ್ದರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಹರಾಖ್‌ನಲ್ಲಿ 60 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ರಸ್ತೆ ಸಾರಿಗೆ ಬಸ್ ಮೇಲೆ ಭಾರೀ ಮಳೆಯಿಂದಾಗಿ ಮರ ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಮಹಿಳೆಯ ತಲೆಗೆ ಗಾಯವಾಗಿದೆ ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ. ಸಾವನ್ನಪ್ಪಿದ ಐವರಲ್ಲಿ, ಇಲ್ಲಿಯವರೆಗೆ ಒಬ್ಬರನ್ನು ಮಾತ್ರ ಗುರುತಿಸಲಾಗಿದೆ.
ಬಾರಾಬಂಕಿ ಬಸ್ ನಿಲ್ದಾಣದಿಂದ ಹೈದರ್ ಘರ್ ಗೆ ಬಸ್ ಹೊರಟಿತ್ತು. ರಸ್ತೆಬದಿಯಲ್ಲಿದ್ದ ಅಂಜೂರದ ಮರ ಇದ್ದಕ್ಕಿದ್ದಂತೆ ಬುಡಮೇಲಾಗಿ ಬಸ್ ಮೇಲೆ ಬಿದ್ದಿತು. ಮರದ ಭಾರದಿಂದಾಗಿ ಬಸ್ಸಿನ ಛಾವಣಿ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಅನೇಕ ಪ್ರಯಾಣಿಕರು ಅದರ ಕೆಳಗೆ ಸಿಲುಕಿದ್ದರು. ತಕ್ಷಣ, ಜಿಲ್ಲಾಡಳಿತ, ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಶಶಾಂಕ್ ತ್ರಿಪಾಠಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಿದರು. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾಗಿದೆ.