ನವದೆಹಲಿ: 13,000 ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ವಂಚನೆಗೆ ಸಂಬಂಧಿಸಿದಂತೆ ಭಾರತದ ಜಾರಿ ನಿರ್ದೇಶನಾಲಯ(ಇಡಿ) ಮತ್ತು ಕೇಂದ್ರ ತನಿಖಾ ದಳ(ಸಿಬಿಐ) ಮಾಡಿದ ಗಡೀಪಾರು ಮನವಿಗಳ ಆಧಾರದ ಮೇಲೆ ಪರಾರಿಯಾದ ವಜ್ರ ವ್ಯಾಪಾರಿ ನೀರವ್ ಮೋದಿಯ ಕಿರಿಯ ಸಹೋದರ ನೆಹಾಲ್ ಮೋದಿಯನ್ನು ಅಮೆರಿಕ ಅಧಿಕಾರಿಗಳು ಬಂಧಿಸಿದ್ದಾರೆ.
ಶುಕ್ರವಾರ ನೆಹಾಲ್ ಅವರನ್ನು ವಶಕ್ಕೆ ಪಡೆಯಲಾಗಿದೆ. ನೆಹಾಲ್ ಪ್ರಕರಣದ ಮುಂದಿನ ವಿಚಾರಣೆ ಜುಲೈ 17 ಕ್ಕೆ ನಿಗದಿಯಾಗಿದೆ. ಅಧಿಕಾರಿಗಳ ಪ್ರಕಾರ, ವಿಚಾರಣೆಯ ಸಮಯದಲ್ಲಿ ನೆಹಾಲ್ ಜಾಮೀನಿಗೆ ಅರ್ಜಿ ಸಲ್ಲಿಸಬಹುದು.
ಇಡಿ ಮತ್ತು ಸಿಬಿಐ ಸಲ್ಲಿಸಿದ ಜಂಟಿ ಗಡೀಪಾರು ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಬಂಧನವಾಗಿದೆ. ಅಮೆರಿಕದ ಪ್ರಾಸಿಕ್ಯೂಟರ್‌ಗಳು ಎರಡು ಆರೋಪಗಳ ಮೇಲೆ ಹಸ್ತಾಂತರವನ್ನು ಮುಂದುವರಿಸುತ್ತಿದ್ದಾರೆ. ಒಂದು ಮನಿ ಲಾಂಡರಿಂಗ್ ತಡೆ ಕಾಯ್ದೆ(PMLA), 2002 ರ ಸೆಕ್ಷನ್ 3 ರ ಅಡಿಯಲ್ಲಿ ಹಣ ವರ್ಗಾವಣೆ ಆರೋಪ ಮತ್ತು ಇನ್ನೊಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-B(ಕ್ರಿಮಿನಲ್ ಪಿತೂರಿ) ಮತ್ತು 201 (ಸಾಕ್ಷ್ಯಗಳ ಕಣ್ಮರೆಗೆ ಕಾರಣವಾಗುವುದು) ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಆರೋಪ.
ಬಹುಕೋಟಿ ಬ್ಯಾಂಕ್ ವಂಚನೆ
46 ವರ್ಷದ ನೆಹಾಲ್ 13,000 ಕೋಟಿ ರೂ. ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ಆರೋಪಿಯಾಗಿದ್ದಾನೆ. ಇದು PNB ಒಳಗೊಂಡ ಭಾರತದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದೆ. ಆಪಾದಿತ ವಂಚನೆಯನ್ನು ನೀರವ್ ಮೋದಿ, ಅವರ ಸಹೋದರ ನೆಹಾಲ್ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ಹುಟ್ಟಿ ಬೆಳೆದ ನೆಹಾಲ್ ಇಂಗ್ಲಿಷ್, ಗುಜರಾತಿ ಮತ್ತು ಹಿಂದಿ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಪ್ರಸ್ತುತ ಲಂಡನ್ ಜೈಲಿನಲ್ಲಿರುವ ಮತ್ತು ಭಾರತಕ್ಕೆ ಗಡೀಪಾರು ಎದುರಿಸುತ್ತಿರುವ ತನ್ನ ಸಹೋದರ ನೀರವ್ ಪರವಾಗಿ ಹಣ ವರ್ಗಾವಣೆ ಆರೋಪದ ಮೇಲೆ ಅವರು ಭಾರತದಲ್ಲಿ ಬೇಕಾಗಿದ್ದಾರೆ.
ಭಾರತದ ಹಣಕಾಸು ಕಾನೂನುಗಳನ್ನು ಉಲ್ಲಂಘಿಸಿ, ಶೆಲ್ ಕಂಪನಿಗಳು ಮತ್ತು ಅಂತರರಾಷ್ಟ್ರೀಯ ವರ್ಗಾವಣೆಗಳನ್ನು ಬಳಸಿಕೊಂಡು ನೆಹಾಲ್ ದೊಡ್ಡ ಪ್ರಮಾಣದ ಅಕ್ರಮ ಹಣವನ್ನು ಮರೆಮಾಡಲು ಮತ್ತು ಸಾಗಿಸಲು ಸಹಾಯ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಇಡಿ ಆರೋಪಪಟ್ಟಿಯಲ್ಲಿ ನೆಹಾಲ್ ಹೆಸರು
ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ತನ್ನ ಆರೋಪಪಟ್ಟಿಯಲ್ಲಿ ನೆಹಾಲ್ ಮೋದಿಯನ್ನು ಹೆಸರಿಸಿದೆ. ಅವರು ಸಾಕ್ಷ್ಯಗಳನ್ನು ನಾಶಪಡಿಸಿದ ಮತ್ತು ನೀರವ್ ಮೋದಿಯನ್ನು ಅಕ್ರಮ ಚಟುವಟಿಕೆಗಳನ್ನು ನಡೆಸುವಲ್ಲಿ “ತಿಳಿದಿದ್ದ ಮತ್ತು ಉದ್ದೇಶಪೂರ್ವಕವಾಗಿ ಬೆಂಬಲಿಸಿದ ಆರೋಪವನ್ನು ಹೊಂದಿದ್ದಾರೆ.
ಪಿಎನ್‌ಬಿ ಹಗರಣ ಬಯಲಾದ ನಂತರ ನೀರವ್ ಅವರ ವಿಶ್ವಾಸಾರ್ಹ ಸಹಚರ ಮಿಹಿರ್ ಆರ್ ಬನ್ಸಾಲಿ ಜೊತೆಗೆ ನೆಹಾಲ್ ದುಬೈನಿಂದ 50 ಕೆಜಿ ಚಿನ್ನ ಮತ್ತು ಭಾರೀ ಹಣವನ್ನು ತೆಗೆದುಕೊಂಡು ಹೋಗಿದ್ದರು ಮತ್ತು ಅಧಿಕಾರಿಗಳ ಮುಂದೆ ಅವರ ಹೆಸರನ್ನು ಬಹಿರಂಗಪಡಿಸದಂತೆ ನಕಲಿ ನಿರ್ದೇಶಕರಿಗೆ ತಿಳಿಸಿದ್ದರು.
ಇಡಿ ಹೊರಡಿಸಿದ ರೆಡ್ ನೋಟಿಸ್
ಭಾರತೀಯ ಅಧಿಕಾರಿಗಳ ಕೋರಿಕೆಯ ಮೇರೆಗೆ, ಇಂಟರ್‌ಪೋಲ್ ಈ ಹಿಂದೆ ನೆಹಾಲ್ ವಿರುದ್ಧ ರೆಡ್ ನೋಟಿಸ್ ಹೊರಡಿಸಿತ್ತು.