ಉತ್ತರ ಪ್ರದೇಶದಲ್ಲಿ ಚಲಿಸುವ ಕಾರ್ ನೊಳಗೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಆಕೆಯ ಜೊತೆಗಿದ್ದ ಸ್ನೇಹಿತೆ ವಾಹನದಿಂದ ಹೊರಗೆ ತಳ್ಳಲ್ಪಟ್ಟ ನಂತರ ಸಾವನ್ನಪ್ಪಿದ್ದಾರೆ.
ಗ್ರೇಟರ್ ನೋಯ್ಡಾದಿಂದ ಇಬ್ಬರು ಮಹಿಳೆಯರನ್ನು ಕರೆದುಕೊಂಡು ಬಲವಂತವಾಗಿ ಕಾರ್ ಹತ್ತಿಸಿಕೊಂಡು ಹೋಗಿ ಕೃತ್ಯವೆಸಗಿದ್ದಾರೆ.
ಗೌತಮ್ ಬುದ್ಧ ನಗರ ನಿವಾಸಿಗಳಾದ ಸಂದೀಪ್ ಮತ್ತು ಅಮಿತ್, ಗಾಜಿಯಾಬಾದ್ ನಿವಾಸಿ ಗೌರವ್ ಕೃತ್ಯವೆಸಗಿದ ಆರೋಪಿಗಳಾಗಿದ್ದಾರೆ. ಕಾರ್ ನಲ್ಲಿ ಮಹಿಳೆಯರು ಮತ್ತು ಪುರುಷರ ನಡುವೆ ಜಗಳ ನಡೆದಾಗ, ಮೀರತ್ ಜಿಲ್ಲೆಯಲ್ಲಿ ಒಬ್ಬ ಮಹಿಳೆಯನ್ನು ಕಾರ್ ನಿಂದ ಹೊರಗೆ ತಳ್ಳಲಾಯಿತು. ನಂತರ ಅವರು ಸಾವನ್ನಪ್ಪಿದ್ದಾರೆ. ಚಲಿಸುವ ಕಾರ್ ನಲ್ಲಿದ್ದ ಮತ್ತೊಬ್ಬ ಮಹಿಳೆ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಬುಲಂದ್ ಶಹರ್ ನ ಖುರ್ಜಾ ಸುತ್ತಮುತ್ತ ಆಕೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ನಂತರ ಆಕೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಆರ್ನಿಯಾ ಪ್ರದೇಶದ ಬುಲಂದ್ ಶಹರ್-ಅಲಿಘರ್ ಹೆದ್ದಾರಿಯ ಬಳಿ ಜಂಟಿ ಪೊಲೀಸ್ ತಂಡ ಆರೋಪಿಗಳನ್ನು ತಡೆದಿದೆ. ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಆರೋಪಿಗಳ ಕಾಲುಗಳಿಗೆ ಗುಂಡು ತಗುಲಿದೆ.
ಬಂಧಿತ ವ್ಯಕ್ತಿಗಳನ್ನು ಸಂದೀಪ್, ಗೌರವ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ. ಎನ್ಕೌಂಟರ್ನಲ್ಲಿ ಸಂದೀಪ್ ಮತ್ತು ಗೌರವ್ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಗ್ರಾಮೀಣ) ಡಾ. ತೇಜ್ವೀರ್ ಸಿಂಗ್ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಗಳಿಂದ ಅಕ್ರಮ ಬಂದೂಕುಗಳು, ಮದ್ದುಗುಂಡುಗಳು, ಬಳಸಲಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಬುಧವಾರ ಖುರ್ಜಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.