ಉತ್ತರ ಪ್ರದೇಶದ ಭಾಗ್‌ಪತ್‌ನಲ್ಲಿ 28 ವರ್ಷದ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ತನ್ನ ಕೈ, ಕಾಲು ಮತ್ತು ಹೊಟ್ಟೆಯ ಮೇಲೆ ವಿಸ್ತೃತ ಆತ್ಮಹತ್ಯಾ ಪತ್ರವನ್ನು ಬರೆದಿಟ್ಟುಕೊಂಡು ಮಂಗಳವಾರ ರಾತ್ರಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.
ಮೃತ ಮಹಿಳೆಯನ್ನು ಮನೀಷಾ ಎಂದು ಗುರುತಿಸಲಾಗಿದೆ. ಆಕೆಯು ತಮ್ಮ ಕೈ, ಕಾಲು ಮತ್ತು ಹೊಟ್ಟೆಯ ಮೇಲೆ ಪೆನ್ನಿನಿಂದ ಬರೆದ ಪತ್ರದಲ್ಲಿ, ಪತಿ ಕುಂದನ್ ಮತ್ತು ಆತನ ಕುಟುಂಬದಿಂದ ತಾವು ಅನುಭವಿಸುತ್ತಿದ್ದ ಕಿರುಕುಳದ ನೋವನ್ನು ವ್ಯಕ್ತಪಡಿಸಿದ್ದಾರೆ. “ನನ್ನ ಸಾವಿಗೆ ಕುಂದನ್ ಮತ್ತು ಆತನ ಕುಟುಂಬವೇ ಕಾರಣ” ಎಂದು ಹಿಂದಿಯಲ್ಲಿ ಬರೆಯಲಾಗಿದೆ.
ಮನೀಷಾ ತಮ್ಮ ಸಾವಿಗೆ ಅತ್ತೆ-ಮಾವನನ್ನು ದೂಷಿಸಿ ವಿಡಿಯೋವನ್ನೂ ಮಾಡಿದ್ದಾರೆ. ಪೊಲೀಸರಿಗೆ ಲಭ್ಯವಾಗಿರುವ ಈ ಕ್ಲಿಪ್‌ನಲ್ಲಿ ಮನೀಷಾ ಅಳುತ್ತಾ, ತನ್ನ ಪತಿ, ಅವರ ತಾಯಿ, ತಂದೆ ಮತ್ತು ಸಹೋದರ ಹೇಗೆ ನಿರಂತರವಾಗಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ. ಮದುವೆಗೆ ತನ್ನ ಕುಟುಂಬ 20 ಲಕ್ಷ ರೂ. ಖರ್ಚು ಮಾಡಿದ್ದರೂ ಮತ್ತು ಬುಲೆಟ್ ಮೋಟಾರ್‌ಸೈಕಲ್ ಅನ್ನು ವರದಕ್ಷಿಣೆಯಾಗಿ ನೀಡಿದ್ದರೂ, ಅವರು ಪದೇ ಪದೇ ಕಾರು ಮತ್ತು ದೊಡ್ಡ ಮೊತ್ತದ ನಗದಿಗೆ ಬೇಡಿಕೆ ಇಡುತ್ತಿದ್ದರು ಎಂದು ಮನೀಷಾ ಹೇಳಿದ್ದಾರೆ.
ಇದಲ್ಲದೆ, ತನ್ನ ಅತ್ತೆ-ಮಾವ ಮತ್ತು ಪತಿ ತನಗೆ ಆಗಾಗ್ಗೆ ಹೊಡೆಯುತ್ತಿದ್ದರು ಮತ್ತು ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು ಎಂದೂ ಆಕೆ ಆರೋಪಿಸಿದ್ದಾರೆ. ವರದಕ್ಷಿಣೆ ಬೇಡಿಕೆಗಳಿಗೆ ಬಗ್ಗದಿದ್ದಾಗ, ಆಕೆಯ ಅತ್ತೆ-ಮಾವ ವಿದ್ಯುತ್ ಆಘಾತ ನೀಡಿ ಕೊಲ್ಲಲು ಪ್ರಯತ್ನಿಸಿದರು ಎಂದು ಮನೀಷಾ ಹೇಳಿಕೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಮನೀಷಾ 2023ರಲ್ಲಿ ನೊಯ್ಡಾದ ಕುಂದನ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ, ಆಕೆಯ ಅತ್ತೆ-ಮಾವ ವರದಕ್ಷಿಣೆಗಾಗಿ ಒತ್ತಡ ಹೇರಲು ಪ್ರಾರಂಭಿಸಿದರು. ಹೆಚ್ಚುತ್ತಿದ್ದ ಮಾನಸಿಕ ಹಿಂಸೆಯಿಂದಾಗಿ, ಮನೀಷಾ 2024ರ ಜುಲೈನಲ್ಲಿ ತನ್ನ ತಾಯಿ ಮನೆಗೆ ಹೋಗಿದ್ದರು. ಆಕೆ ಸಾವಿಗೂ ನಾಲ್ಕು ದಿನಗಳ ಮೊದಲು, ಮನೀಷಾ ಅವರ ಕುಟುಂಬ ಆಕೆಗೆ ವಿಚ್ಛೇದನ ಕೊಡಿಸುವ ಬಗ್ಗೆ ಚರ್ಚಿಸಲು ಪ್ರಾರಂಭಿಸಿತ್ತು. ಆದರೆ, ಅತ್ತೆ-ಮಾವ ವರದಕ್ಷಿಣೆ ವಸ್ತುಗಳನ್ನು ಹಿಂದಿರುಗಿಸುವವರೆಗೂ ವಿಚ್ಛೇದನ ಪತ್ರಗಳಿಗೆ ಸಹಿ ಹಾಕುವುದಿಲ್ಲ ಎಂದು ಮನೀಷಾ ಹೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.