ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆಹಾರದಲ್ಲಿ ಹೆಚ್ಚಿನ ಉಪ್ಪು ಇದ್ದ ಕಾರಣ ಗರ್ಭಿಣಿ ಪತ್ನಿಯನ್ನೇ ಪತಿ ಹೊಡೆದು ಕೊಲೆ ಮಾಡಿದ್ದಾನೆ.
ಕಾಸ್ಗಂಜ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಐದು ತಿಂಗಳ ಗರ್ಭಿಣಿ ಪತ್ನಿಯನ್ನು ಹೊಡೆದು ಕೊಂದಿದ್ದಾನೆ. ಬುಧವಾರ ಸಂಜೆ ಬೇಯಿಸಿದ ಆಹಾರದಲ್ಲಿ ಹೆಚ್ಚಿನ ಉಪ್ಪು ಇದ್ದ ಕಾರಣ ನಡೆದ ಜಗಳದಿಂದ ಬ್ರಜ್ ಬಾಲಾ(25) ಹಲ್ಲೆಗೆ ಒಳಗಾಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ನಾಗ್ಡಾ ಧಾಕ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬ್ರಜ್ ಬಾಲಾ ಮತ್ತು ಆಕೆಯ ಪತಿ ರಾಮು ನಡುವೆ ಊಟದ ಬಗ್ಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯದಿಂದ ಜಗಳವಾಗಿದೆ. ರಾಮು, ಬ್ರಜ್ಬಾಲಾ ಮೇಲೆ ದಾಳಿ ಮಾಡಿದ್ದು, ಆಕೆ ಛಾವಣಿಯಿಂದ ಬಿದ್ದು ತೀವ್ರ ಗಾಯಗೊಂಡಿದ್ದಾಳೆ. ಕುಟುಂಬ ಸದಸ್ಯರು ಬ್ರಜ್ಬಾಲಾ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ, ಅವರನ್ನು ಅಲಿಘರ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಗುರುವಾರ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.
ರಾಮು ತನ್ನ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದನ್ನು ಬ್ರಜ್ಬಾಲಾ ವಿರೋಧಿಸಿದ್ದಕ್ಕೆ ದಂಪತಿಗಳ ನಡುವೆ ಆಗಾಗ್ಗೆ ಜಗಳಕ್ಕೆ ಕಾರಣವಾಗಿತ್ತು ಎಂದು ಬ್ರಜ್ಬಾಲಾ ಸಾವಿನ ನಂತರ ಆಕೆಯ ಸಹೋದರ ಆರೋಪಿಸಿದ್ದಾರೆ.
ಘಟನೆಯ ನಂತರ ರಾಮು ಸ್ಥಳದಿಂದ ಪರಾರಿಯಾಗಿದ್ದು, ನಂತರ ಅದೇ ರಾತ್ರಿ ಗ್ರಾಮದ ಹೊರಗಿನ ಮನೆಯಲ್ಲಿದ್ದ ಅವನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಮು ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಭಾರ್ತಿ ಹೇಳಿದ್ದಾರೆ.