ಮಥುರಾ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ತನ್ನ ಅಪ್ರಾಪ್ತ ಪುತ್ರಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬನನ್ನು ಆತನ ಮಗ ಮತ್ತು ಸೋದರಳಿಯ(ಇಬ್ಬರೂ ಅಪ್ರಾಪ್ತ ವಯಸ್ಕರು) ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಸ್ಥಾನದ ದೀಗ್ ಜಿಲ್ಲೆಯವರಾದ ಪವನ್ ಚೌಧರಿ ಎಂದು ಗುರುತಿಸಲ್ಪಟ್ಟ ಮೃತ ವ್ಯಕ್ತಿ, ಈ ಹಿಂದೆ ದರೋಡೆ, ಅಪಹರಣ ಮತ್ತು ಕಿರುಕುಳ ಪ್ರಕರಣಗಳನ್ನು ಎದುರಿಸುತ್ತಿದ್ದ ಅಪರಾಧಿ ಎಂದು ಹೇಳಿದ್ದಾರೆ.
ಪೊಲೀಸರ ಪ್ರಕಾರ, 13 ಮತ್ತು 14 ವರ್ಷ ವಯಸ್ಸಿನ ಹುಡುಗಿಯರು ದೀಪಾವಳಿಯ ಸಮಯದಲ್ಲಿ ಕೋಸಿಕಲನ್ ಪ್ರದೇಶದ ಹಳ್ಳಿಯಲ್ಲಿ ಚೌಧರಿಯ ಅಣ್ಣನ ಜೊತೆ ವಾಸಿಸಲು ಬಂದಿದ್ದರು. ಅನೈತಿಕ ಸಂಬಂಧ ಮತ್ತು ಚಿತ್ರಹಿಂಸೆಯಿಂದ ತಪ್ಪಿಸಿಕೊಳ್ಳಲು ಮತ್ತು ತನ್ನ ಅಧ್ಯಯನವನ್ನು ಮುಂದುವರಿಸಲು ಅವರ ಸಹೋದರ ಈಗಾಗಲೇ ಚಿಕ್ಕಪ್ಪನ ಜೊತೆಯಲ್ಲಿ ವಾಸಿಸುತ್ತಿದ್ದ.
ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಚೌಧರಿ ತನ್ನ ಸಹೋದರನ ಮನೆಗೆ ಬಂದು ಹುಡುಗಿಯರನ್ನು ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಬಾಲಕಿಯರ ಅವರ ಕೂಗು ಕೇಳಿ ಚೌಧರಿ ಅವರ ಮಗ ಮತ್ತು ಸೋದರಳಿಯ ಅವನನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅವನು ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ಈ ಗಲಾಟೆಯಲ್ಲಿ, ಅಪ್ರಾಪ್ತ ಬಾಲಕರು ಚೌಧರಿಯ ನಾಡ ಪಿಸ್ತೂಲ್ ಮತ್ತು ಕತ್ತಿಯನ್ನು ಕಸಿದುಕೊಂಡು ಅವನನ್ನು ಕೊಂದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ(ಗ್ರಾಮೀಣ) ಸುರೇಶ್ ಚಂದ್ರ ರಾವತ್ ಅವರು, ಚೌಧರಿಯ ವಿರುದ್ಧ ದೀಗ್ನಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ. ಅವನು ದರೋಡೆ, ಅಪಹರಣ ಮತ್ತು ಕಿರುಕುಳದ ಇತಿಹಾಸ ಹೊಂದಿರುವ ಅಪರಾಧಿ. ಪ್ರಾಥಮಿಕ ತನಿಖೆಯಲ್ಲಿ ಮೃತನು ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳೊಂದಿಗೆ ಅಸಹ್ಯಕರವಾಗಿ ವರ್ತಿಸಿದ್ದಾನೆ, ನಂತರ ಅವರು ಅವನೊಂದಿಗೆ ವಾಸಿಸಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಚಿಕ್ಕಪ್ಪ ಅವರನ್ನು ಶಿಕ್ಷಣಕ್ಕಾಗಿ ಹಾಸ್ಟೆಲ್ಗೆ ಸೇರಿಸಲು ಪ್ರಯತ್ನಿಸಿ ಅವರನ್ನು ಕರೆತಂದಿದ್ದರು ಎಂದು ಹೇಳಿದ್ದಾರೆ.
ಘಟನೆಯ ನಂತರ, ಪೊಲೀಸರು ಅಪ್ರಾಪ್ತ ಬಾಲಕರನ್ನು ಬಂಧಿಸಿದರು. ವಿಚಾರಣೆಯಲ್ಲಿ, ನಾಲ್ವರು ಮಕ್ಕಳು ಪದೇ ಪದೇ ದೌರ್ಜನ್ಯ ಮತ್ತು ಚಿತ್ರಹಿಂಸೆ ನೀಡುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ.
ಕೋಸಿಕಲನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಅಜಯ್ ಕೌಶಲ್, ಚೌಧರಿಯ ಸಹೋದರ ಹರಿಶಂಕರ್ ಮಕ್ಕಳ ಹೇಳಿಕೆಗಳನ್ನು ದೃಢಪಡಿಸಿದ್ದಾರೆ.
ಚೌಧರಿ ಈ ಹಿಂದೆ ಒಬ್ಬ ಹುಡುಗಿಯನ್ನು ಅಪಹರಿಸಿದ್ದಕ್ಕಾಗಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾನೆ. ಮತ್ತು ಹೆಂಡತಿಯನ್ನು ಕೊಲೆ ಮಾಡಿದ ಆರೋಪವೂ ಅವನ ಮೇಲಿದೆ. ಈ ಕಾರಣಕ್ಕಾಗಿ ಅವರ ಹೆಣ್ಣುಮಕ್ಕಳು ಅವರೊಂದಿಗೆ ವಾಸಿಸಲು ನಿರಾಕರಿಸಿದ್ದರು ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತರ ಚಿಕ್ಕಪ್ಪ ರಾಮದೇವ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಮಕ್ಕಳನ್ನು ವಿಚಾರಣೆ ನಡೆಸಲಾಗುತ್ತಿದೆ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
