ಪ್ರಯಾಣಿಕರು ನಮಾಜ್ ಮಾಡಲು ಬಸ್ ನಿಲ್ಲಿಸಿದ್ದ ಚಾಲಕ, ಸಹಾಯಕ ಸಸ್ಪೆಂಡ್

ಲಖ್ನೋ: ಇಬ್ಬರು ಪ್ರಯಾಣಿಕರಿಗೆ ನಮಾಜ್ ಮಾಡಲು ಅವಕಾಶ ಮಾಡಿಕೊಡಲು ಬಸ್ ನಿಲ್ಲಿಸಿದ್ದ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ಸಹಾಯಕನನ್ನು ಸೋಮವಾರ ಅಮಾನತುಗೊಳಿಸಲಾಗಿದೆ.

ಜೂನ್ 4 ರಂದು ಬಸ್ ಬರೇಲಿ ಟರ್ಮಿನಲ್‌ನಿಂದ ಹೊರಟು ರಾಂಪುರ ಜಿಲ್ಲೆಯ ಮಿಲಾಕ್ ಪ್ರದೇಶದಲ್ಲಿ NH24 ನಲ್ಲಿ ನಿಂತ ನಂತರ ಈ ಘಟನೆ ನಡೆದಿದೆ. ಈ ವೇಳೆ ಬಸ್‌ನಲ್ಲಿ 14 ಮಂದಿ ಪ್ರಯಾಣಿಕರಿದ್ದರು.

ಕೆಲವು ಪ್ರಯಾಣಿಕರು ರಸ್ತೆ ಬದಿಯ ಶೌಚಾಲಯ ಬಳಸಲು ಬಯಸಿದ್ದರಿಂದ ಬಸ್ ನಿಲ್ಲಿಸಿದೆ ಎಂದು ಚಾಲಕ ಕೆ.ಪಿ. ಸಿಂಗ್ ಹೇಳಿದ್ದಾರೆ. ಆಗ ಇತರ ಇಬ್ಬರು ಪ್ರಯಾಣಿಕರು ನಮಾಜ್ ಮಾಡಲು ಬಯಸುವುದಾಗಿ ಹೇಳಿದ್ದು, ಅದನ್ನು ಒಪ್ಪಿಕೊಂಡು ನಮಾಜ್ ಮಾಡಲು ಅವಕಾಶ ನೀಡುವ ಉದ್ದೇಶದಿಂದ ಕೆಲವು ನಿಮಿಷಗಳ ಕಾಲ ಬಸ್ ನಿಲ್ಲಿಸಿದ್ದಾಗಿ ತಿಳಿಸಿದ್ದಾರೆ.

ಇಬ್ಬರು ಪ್ರಯಾಣಿಕರು ತಮ್ಮ ಪ್ರಾರ್ಥನೆಯನ್ನು ಮುಗಿಸಲು ಸಿಂಗ್ ಕಾಯುತ್ತಿರುವುದನ್ನು ಕಂಡು ಬಸ್‌ನಲ್ಲಿದ್ದ ಇತರ ಕೆಲವು ಪ್ರಯಾಣಿಕರು ಪ್ರತಿಭಟನೆ ನಡೆಸಿದರು. ಒಬ್ಬ ಪ್ರಯಾಣಿಕ ಘಟನೆಯ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ವ್ಯಕ್ತಿಗಳು ನಮಾಜ್ ಮಾಡಲು ಪ್ರಯಾಣಿಕರಿದ್ದ ಬಸ್ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಾಥಮಿಕ ವಿಚಾರಣೆಯ ನಂತರ ಸಿಂಗ್ ಮತ್ತು ಯಾದವ್ ಅವರನ್ನು ಅಮಾನತುಗೊಳಿಸಲಾಗಿದೆ. ಜನನಿಬಿಡ ಹೆದ್ದಾರಿಯಲ್ಲಿ ಬಸ್ ನಿಲ್ಲಿಸಿದ್ದು, ಪ್ರಯಾಣಿಕರ ಸುರಕ್ಷತೆಗೆ ಗಮನಹರಿಸಿಲ್ಲ ಎಂದು ಸಾರಿಗೆ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ದೀಪಕ್ ಚೌಧರಿ ತಿಳಿಸಿದ್ದಾರೆ.

ನಮಾಜ್ ಮಾಡಿದ ಗುಜರಾತ್‌ನ ಅಹಮದಾಬಾದ್‌ನ ನಿವಾಸಿ ಹುಸೇನ್ ಮನ್ಸೂರಿ, ಚಾಲಕ ಸಿಂಗ್ ಮತ್ತು ಸಹಾಯಕ ಯಾದವ್ ವಿರುದ್ಧದ ಕ್ರಮ ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ.

ಬೇರೆ ಪ್ರಯಾಣಿಕರಿಗಾಗಿಯೂ ಬಸ್ ನಿಂತಿದೆ. ನಮಗೆ ಪ್ರಾರ್ಥನೆ ಸಲ್ಲಿಸಲು ಸಮಯ ನೀಡಿದ್ದಕ್ಕಾಗಿ ಇಂತಹ ಕ್ರಮ ಕೈಗೊಂಡಿರುವುದು ನನಗೆ ಆಶ್ಚರ್ಯವಾಗಿದೆ. ಅಗತ್ಯವಿದ್ದರೆ, ನಾನು ಅವರನ್ನು ಬೆಂಬಲಿಸಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಮತ್ತು ಸಿಂಗ್ ಅಮಾನತು ಆದೇಶವನ್ನು ಪ್ರಶ್ನಿಸುತ್ತೇವೆ ಎಂದು ಯಾದವ್ ಹೇಳಿದ್ದಾರೆ. ಅವರು ಪ್ರಾರ್ಥನೆ ಸಲ್ಲಿಸುವ ಮೂಲಕ ಯಾವುದೇ ತಪ್ಪು ಮಾಡಿದ್ದಾರೆ ಎಂದು ನಾವು ಭಾವಿಸುವುದಿಲ್ಲ ಎಂದು ಯಾದವ್ ತಿಳಿಸಿದ್ದಾರೆ.

ನೌಕರರ ಕ್ಷೇಮಾಭಿವೃದ್ಧಿ ಸಂಘವೂ ಸಿಂಗ್ ಮತ್ತು ಯಾದವ್ ಅವರಿಗೆ ಬೆಂಬಲ ನೀಡಿದೆ. ಸರಿಯಾದ ತನಿಖೆ ಇಲ್ಲದೆ ನೌಕರರನ್ನು ಅಮಾನತುಗೊಳಿಸಲಾಗುವುದಿಲ್ಲ ಎಂದು ಸಂಘದ ಅಧ್ಯಕ್ಷ ಹರಿ ಮೋಹನ್ ಹೇಳಿದ್ದಾರೆ. ಅಂತಹ ದೂರುಗಳಿದ್ದಲ್ಲಿ ಸಮಿತಿ ರಚಿಸಲಾಗುತ್ತದೆ. ಸಮಿತಿಯು ವ್ಯಕ್ತಿಯನ್ನು ತಪ್ಪಿತಸ್ಥರೆಂದು ಕಂಡುಹಿಡಿದ ನಂತರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಅವರಿಗೆ ವಿವರಣೆ ನೀಡಲು ಸಮಯವನ್ನೂ ನೀಡಿಲ್ಲ ಎಂದು ಟೀಕಿಸಿದ್ದಾರೆ.

https://twitter.com/kofmajhab1/status/1665652995072335872

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read