ಬೆಂಗಳೂರು: ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರ ಹುದ್ದೆಯು ಸಾರ್ವಜನಿಕ ಹುದ್ದೆಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ಹೈಕೋರ್ಟ್ ಆದೇಶಿಸಿದೆ.
ಅರ್ಹತೆ ಇಲ್ಲದಿದ್ದರೂ ಬೆಂಗಳೂರು ವಿಶ್ವವಿದ್ಯಾಲಯದ ಜೀವವಿಜ್ಞಾನಗಳ ವಿಭಾಗದ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ಪಡೆದಿರುವ ಡಾ.ಎಂ. ಶಿವಶಂಕರ್ ಅವರನ್ನು ಆ ಹುದ್ದೆಯಿಂದ ತೆರವುಗೊಳಿಸಿ ಆದೇಶಿಸಬೇಕು ಎಂದು ಕೋರಿ ಹೆಚ್.ಟಿ. ಉಮೇಶ್, ಡಾ. ಎಸ್. ಆನಂದ್ ಮತ್ತು ಡಾ.ಹೆಚ್.ಪಿ. ಪುಟ್ಟರಾಜು ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ. ವೈಯಕ್ತಿಕ ಹಿತಾಸಕ್ತಿಯಿಂದ ಈ ಅರ್ಜಿ ಸಲ್ಲಿಸಲಾಗಿದ್ದು, ಕಾನೂನಿನ ದುರ್ಬಳಕೆಯಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿದಾರರಿಗೆ 7500 ರೂ. ದಂಡ ವಿಧಿಸಲಾಗಿದೆ.