ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಸಮೀಪ ಕೇತುಗಾನಹಳ್ಳಿಯಲ್ಲಿ ಒತ್ತುವರಿ ಮಾಡಿದ್ದಾರೆ ಎನ್ನಲಾದ 14 ಎಕರೆ ಸರ್ಕಾರಿ ಜಮೀನು ಕುರಿತು ವಿಚಾರಣೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದ ಸರ್ಕಾರದ ಆದೇಶ ಮತ್ತು ಕುಮಾರಸ್ವಾಮಿಯವರಿಗೆ ರಾಮನಗರ ತಹಶೀಲ್ದಾರ್ ಜಾರಿ ಮಾಡಿದ್ದ ಸಮನ್ಸ್ ಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ಸೋಮವಾರ ತಡೆ ಹಿಡಿದಿದೆ.
ಇದರಿಂದಾಗಿ ಪ್ರಕರಣದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಎಸ್ಐಟಿಯ ವಿಚಾರಣೆ ಮುಂದುವರೆಸಲು ಹಾದಿ ಸುಗಮವಾಗಿದೆ. ಎಸ್ಐಟಿ ರಚಿಸಿ 2025ರ ಜನವರಿ 28ರಂದು ಹೊರಡಿಸಲಾದ ಆದೇಶ ಮತ್ತು ಪ್ರಕರಣ ಕುರಿತು ರಾಮನಗರ ತಹಶೀಲ್ದಾರ್ ಮೇ 29ರಂದು ಹೊರಡಿಸಿದ್ದ ಸಮನ್ಸ್ ರದ್ದು ಕೋರಿ ಹೆಚ್.ಡಿ. ಕುಮಾರಸ್ವಾಮಿ ಹೈಕೀರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಏಕ ಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿ ಸಮನ್ಸ್ ಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿತ್ತು. ತಡೆಯಾಜ್ಞೆ ರದ್ದು ಕೋರಿ ರಾಜ್ಯ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಸೋಮವಾರ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ವಿಚಾರಣೆ ನಡೆಸಿದೆ. ಮೇಲ್ಮನವಿಯ ಮುಂದಿನ ವಿಚಾರಣೆಯವರೆಗೆ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಲಾಗಿದೆ. ಪ್ರತಿವಾದಿ ಹೆಚ್.ಡಿ. ಕುಮಾರಸ್ವಾಮಿಗೆ ನೋಟಿಸ್ ಜಾರಿ ಮಾಡಲಾಗಿದೆ.