ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ಪೂಜ್ಯ ಬಾಪು ರೋಜಗಾರ್ ಯೋಜನೆ ಎಂದು ಬದಲಿಸಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ.
ಕೇಂದ್ರದಲ್ಲಿ ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದಿದ್ದ ಎಂ -ನರೇಗಾ ಹೆಸರು ಬದಲಾಯಿಸಲು ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. ಪೂಜ್ಯ ಬಾಪು ರೋಜಗಾರ್ ಯೋಜನೆ ಎಂದು ನಾಮಕರಣ ಮಾಡಿದ್ದು ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ.
ಜೊತೆಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಉದ್ಯೋಗ ಖಾತ್ರಿ ಕೂಲಿಯನ್ನು 125 ದಿನಕ್ಕೆ ಹೆಚ್ಚಳ ಮಾಡಲಾಗಿದೆ. ಗ್ರಾಮೀಣ ಭಾಗದ ಅಸಂಘಟಿತ ಕಾರ್ಮಿಕರಿಗೆ ವರ್ಷಕ್ಕೆ ಕನಿಷ್ಠ 125 ದಿನಗಳ ಉದ್ಯೋಗ ಖಾತ್ರಿ ನೀಡಲಿದೆ. ಯೋಜನೆಗಾಗಿ 1.5 ಲಕ್ಷ ಕೋಟಿ ರೂ.ಗೂ ಅಧಿಕ ಅನುದಾನ ಮೀಸಲಿಡಲು ಯೋಜಿಸಲಾಗಿದೆ.
