ಶಿವಮೊಗ್ಗ: ಕ್ರೆಡಿಟ್ ಕಾರ್ಡಿನಿಂದ ಅನಧಿಕೃತವಾಗಿ ಕಡಿತವಾದ ಮೊತ್ತಗಳ ಬಗ್ಗೆ ಆರ್‌ಬಿಐ ಮಾರ್ಗಸೂಚಿಗಳನ್ನು ಪರಿಗಣಿಸದೆ ಹಾಗೂ ಸರಿಯಾದ ರೀತಿಯಲ್ಲಿ ತನಿಖೆಯನ್ನು ಮಾಡದೇ, ಕಟಾವಣೆಗೊಂಡ ಮೊತ್ತವನ್ನು ಕ್ರೆಡಿಟ್ ಕಾರ್ಡ್ಗೆ ಮರುಜಮೆ ಮಾಡದೇ ಎಸ್‌ಬಿಐ ಕಾರ್ಡ್ಸ್ ಮತ್ತು ಪೇಮೆಂಟ್ ಸರ್ವಿಸ್ ಲಿ.ಬೆಂಗಳೂರು ಇವರು ಸೇವಾನ್ಯೂನ್ಯತೆ ಎಸಗಿದ್ದು ದೂರುದಾರರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಜ ಆದೇಶಿಸಿದೆ.
ದೂರುದಾರರಾದ ಮಂಜುನಾಥ ಜಿ. ತಿಲಕ್‌ನಗರ ಶಿವಮೊಗ್ಗ ಇವರು ಎಸ್.ಬಿ.ಐ ಕಾರ್ಡ್ಸ್ ಮತ್ತು ಪೇಮೆಂಟ್ ಸರ್ವೀಸ್ ಲಿ.. ಬೆಂಗಳೂರು ಇವರ ವಿರುದ್ಧ ದೂರನ್ನು ಸಲ್ಲಿಸಿರುತ್ತಾರೆ. ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ದೂರುದಾರರು ಎಸ್.ಬಿ.ಐ ಬ್ಯಾಂಕ್, ತಿಲಕ್ ನಗರ ಶಾಖೆ, ಶಿವಮೊಗ್ಗ, ಇಲ್ಲಿ ವೇತನ ಖಾತೆಯನ್ನು ಹೊಂದಿದ್ದು,ಈ ಬ್ಯಾಂಕಿನವರು ಎಸ್.ಬಿ.ಐ. ಕ್ರೆಡಿಟ್ ಕಾರ್ಡ್ನ್ನು ನೀಡಿರುತ್ತಾರೆ. ಕ್ರೆಡಿಟ್ ಕಾರ್ಡ್ನ್ನು ಅವಶ್ಯಕತೆಗೆ ತಕ್ಕಂತೆ ಉಪಯೋಗಿಸುತ್ತಾ ಬಂದಿದ್ದು, ವಾರ್ಷಿಕ ಶುಲ್ಕವನ್ನು ಪಾವತಿಸುತ್ತಿದ್ದರೂ ದಿ:21/05/2024 ರಂದು ರೂ.40,000/-, ರೂ.50,000/- ಮತ್ತು ರೂ.1,01,940/-ಗಳು ಕ್ರೆಡಿಟ್ ಕಾರ್ಡ್ನಲ್ಲಿ ಕಟಾವಣೆಯಾಗಿರುವುದಾಗಿ ಸಂದೇಶ ಬಂದಿರುತ್ತದೆ.(ಮೂರು ಕಟಾವಣೆ ಪ್ರತ್ಯೇಕವಾಗಿರುತ್ತವೆ).
ತದನಂತರ ಎದುರುದಾರರ ಕನ್ಸೂಮರ್-ಕೇರ್ ನಿಂದ ಬಂದ ದೂರವಾಣಿ ಕರೆ ಮೂಲಕ ವಿಚಾರಿಸಲಾಗಿ, ದೂರುದಾರರು ಯಾವುದೇ ವ್ಯವಹಾರವನ್ನು ಮಾಡಿರುವುದಿಲ್ಲ ಎಂದು ತಿಳಿಸಿ, ಸರ್ವೀಸ್ ರಿಕ್ವೆಸ್ಟ್ ಮಾಡಿ ಈ ವ್ಯವಹಾರಗಳ ಕುರಿತು ತನಿಖೆಯನ್ನು ಮಾಡಲು ಕೋರಿರುತ್ತಾರೆ. ಹಾಗೂ ಆನ್‌ಲೈನ್ ಮೂಲಕ ಪೊಲೀಸ್ ಠಾಣೆಯಲ್ಲಿ ದೂರುನ್ನು ಸಲ್ಲಿಸಿರುತ್ತಾರೆ.
ಸದರಿ ವ್ಯವಹಾರಗಳನ್ನು ಮಾಡಲು ಸಿವಿವಿ ಮತ್ತು ಓಟಿಪಿ ಯನ್ನು ನಮೂದಿಸದೇ ಹೇಗೆ ವ್ಯವಹಾರ ಸಾಧ್ಯವಾಯಿತು ಎಂದು ಇ-ಮೇಲ್ ಮೂಲಕ ದೂರನ್ನು ನೀಡಿದಾಗ, ಎದುರುದಾರರು ದಿ: 16/08/2024 ತನಿಖೆ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ, ತದನಂತರ ಎದುರುದಾರರು ದಿ:19/11/2024 ರಂದು ದೂರುದಾರರಿಗೆ ಇ-ಮೇಲ್ ಮಾಡಿ ತಮ್ಮ ದೂರನ್ನು ಮುಕ್ತಾಯಗೊಳಿಸಿರುವುದಾಗಿ ತಿಳಿಸಿರುತ್ತಾರೆ. ದೂರುದಾರರ ಕ್ರೆಡಿಟ್ ಕಾರ್ಡಿನಿಂದ ಅನಧಿಕೃತವಾಗಿ ಕಡಿತವಾದ ಮೊತ್ತಗಳ ಬಗ್ಗೆ ಎದುರುದಾರರು ಆರ್‌ಬಿಐ ಗೈಡ್‌ಲೈನ್ಸ್/ರೆಗ್ಯೂಲೇಶನ್‌ಗಳನ್ನು ಪರಿಗಣಿಸದೆ ಹಾಗೂ ಸರಿಯಾದ ರೀತಿಯಲ್ಲಿ ತನಿಖೆಯನ್ನು ಮಾಡದೇ, ಕಟಾವಣೆಗೊಂಡ ಮೊತ್ತವನ್ನು ಕ್ರೆಡಿಟ್ ಕಾರ್ಡ್ಗೆ ಮರುಜಮೆ ಮಾಡದೇ, ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ದೂರನ್ನು ಸಲ್ಲಿಸಿರುತ್ತಾರೆ.
ದೂರುದಾರರು ಸಲ್ಲಿಸಿರುವ ದಾಖಲಾತಿಗಳನ್ನು ಪರಿಶೀಲಿಸಿ, ದೂರುದಾರರ ವಾದವನ್ನು ಆಲಿಸಿ, ಎದುರುದಾರರು ಆರ್‌ಬಿಐ ಸುತ್ತೋಲೆಯಂತೆ ಸರಿಯಾದ ರೀತಿಯಲ್ಲಿ ತನಿಖೆಯನ್ನು ಮಾಡದೇ ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, ದೂರನ್ನು ಪುರಸ್ಕರಿಸಿ, ಎದುರುದಾರರು ರೂ.1,01,940/-ಗಳನ್ನು ದೂರುದಾರರ ಕ್ರೆಡಿಟ್ ಕಾರ್ಡ್ ಖಾತೆಗೆ 45 ದಿನಗಳ ಒಳಗೆ ಜಮಾ ಮಾಡುವುದು ಮತ್ತು ಎದುರುದಾರರು ರೂ.25,000/- ಗಳನ್ನು ಮತ್ತು ರೂ.10,000/-ಗಳನ್ನು ಮಾನಸಿಕ ಹಿಂಸೆಗೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ 45 ದಿನಗಳ ಒಳಗಾಗಿ ಪಾವತಿಸುವುದು, ತಪ್ಪಿದ್ದಲ್ಲಿ ವಾರ್ಷಿಕ ಶೇ.10ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ನೀಡುವವರೆಗೆ ನೀಡತಕ್ಕದ್ದು ಎಂದು ಆಯೋಗದ ಅಧ್ಯಕ್ಷ ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠವು ದಿನಾಂಕ:29/11/2025ರಂದು ಆದೇಶಿಸಿದೆ.
