ಕಲಬುರಗಿ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಲಾಗಿದೆ.
2017ರಲ್ಲಿ ನಡೆದಿದ್ದ ಗರ್ಭಿಣಿಯ ಮರ್ಯಾದೆಗೇಡು ಹತ್ಯೆ ಪ್ರಕರಣದ ಇಬ್ಬರು ಆರೋಪಿತರಿಗೆ ವಿಜಯಪುರ ಜಿಲ್ಲಾ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ಕಲಬುರಗಿ ಹೈಕೋರ್ಟ್ ಪೀಠ ಕಾಯಂಗೊಳಿಸಿ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಹೆಚ್.ಪಿ, ಸಂದೇಶ್ ಮತ್ತು ಟಿ.ಎಂ. ನದಾಫ್ ಅವರ ಸದಸ್ಯ ಪೀಠದಿಂದ ತೀರ್ಪು ನೀಡಲಾಗಿದೆ.
ಇಬ್ರಾಹಿಂ ಸಾಬ್ ಅತ್ತಾರ(31), ಅಕ್ಬರ್ ಸಾಬ್ ಅತ್ತಾರ(28) ಗಲ್ಲು ಶಿಕ್ಷೆಗೆ ಒಳಗಾದ ಆರೋಪಿಗಳು. ಉಳಿದ ಐವರು ಆರೋಪಿಗಳಿಗೆ ನೀಡಿದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. 9 ತಿಂಗಳ ಗರ್ಭಿಣಿಯಾದ ಸಹೋದರಿಗೆ ಬೆಂಕಿ ಹಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದ ಇಬ್ರಾಹಿಂ ಸಾಬ್ ಮತ್ತು ಅಕ್ಬರ್ ಸಾಬ್ ಲಾರಿ ಚಾಲಕರಾಗಿದ್ದರು. ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಅಯೋಜಕ ಸಿದ್ದಲಿಂಗ ಪಿ. ಪಾಟೀಲ್ ಸುಧೀರ್ಘ ವಾದ ಮಂಡಿಸಿದ್ದರು.
2017ರ ಜೂನ್ 3ರಂದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ಬಾನು ಅತ್ತಾರ(20) ಎಂಬ ಒಂಬತ್ತು ತಿಂಗಳ ಗರ್ಭಿಣಿಗೆ ಬೆಂಕಿ ಹಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪೋಷಕರು, ಸಹೋದರರು, ಬಂಧುಗಳು ಸೇರಿದ್ದರು.
ಯುವತಿ ಅದೇ ಗ್ರಾಮದ ಸಾಯಿಬಣ್ಣ ಕೊಣ್ಣೂರು ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಅನ್ಯ ಧರ್ಮಕ್ಕೆ ಸೇರಿದ ಯುವಕನನ್ನು ಮದುವೆಯಾಗಿದ್ದರಿಂದ ಕುಟುಂಬದ ಮರ್ಯಾದೆ ಹಾಳಾಗಿದೆ ಎಂದು ದ್ವೇಷ ಸಾಧಿಸಿ ಬಾನುಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ತಾಳಿಕೋಟೆ ಪೊಲೀಸ್ ಠಾಣೆಗೆ ಪತಿ ಸಾಯಬಣ್ಣ ದೂರು ನೀಡಿದ್ದರು. ಬಸವನಬಾಗೇವಾಡಿ ಡಿವೈಎಸ್ಪಿ ಪಿ.ಕೆ. ಪಾಟೀಲ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.