ಕೊಪ್ಪಳ: ಕಾಲುವೆಯಲ್ಲಿ ಈಜುವಾಗ ವಿದ್ಯುತ್ ಸ್ಪರ್ಶಿಸಿ ಇಬ್ಬರು ಬಾಲಕರು ಮೃತಪಟ್ಟ ಘಟನೆ ಮುನಿರಾಬಾದ್ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮಂಜುನಾಥ್(13), ಯಮನಪ್ಪ(12) ಮೃತಪಟ್ಟವರು. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮಕ್ಕಳು ಕಾಲುವೆಯಲ್ಲಿ ಈಜಲು ಹೋಗಿದ್ದಾರೆ. ಗ್ರಾಮಕ್ಕೆ ನೀರು ಪೂರೈಕೆ ಉದ್ದೇಶದಿಂದ ಕಾಲುವೆಯ ಎರಡೂ ಬದಿಯಲ್ಲಿ ಟಿಸಿ ಮತ್ತು ಪಂಪ್ಸೆಟ್ ಅಳವಡಿಸಲಾಗಿದೆ. ಒಂದು ಬದಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಕಾಲುವೆ ಮೇಲೆ ಕಬ್ಬಿಣದ ಪೈಪ್ ಹಾಕಿ ಅದರೊಳಗೆ ವಿದ್ಯುತ್ ಕೇಬಲ್ ಹಾಕಲಾಗಿದೆ.
ಇದನ್ನು ಗಮನಿಸದ ಬಾಲಕರು ಕಬ್ಬಿಣದ ಪೈಪ್ ಹಿಡಿದುಕೊಂಡು ಜೀಕುವಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಗೆ ಪಿಡಿಒ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.