ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಗಾಂಜಾ ಹಾಗೂ ಬೈಕ್ ವಶಕ್ಕೆ ಪಡೆಯಲಿದೆ.
ಶಿವಮೊಗ್ಗ ನಗರದ ಹರಿಗೆ ಎಂಆರ್‌ಎಸ್ ಕಾಂಪೌಂಡ್ ಗೆ ಹೊಂದಿಕೊಂಡಂತೆ ಇರುವ ನಿರ್ಮಾಣ ಹಂತದಲ್ಲಿರುವ ವಡ್ಡಿನಕೊಪ್ಪ ರಂಗನಾಥ ಲೇಔಟ್‌ನ ಡಾಂಬರ್ ರಸ್ತೆಯಲ್ಲಿ, ಕೋಳಿಫಾರಂ ಶೆಡ್ ನ ಹತ್ತಿರ. ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿತ್ತು.
ಈ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಎಸ್ಪಿ ಮಿಥುನ್ ಕುಮಾರ್ ಜಿ.ಕೆ., ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಅನಿಲ್ ಕುಮಾರ್ ಭೂಮರಡ್ಡಿ, ಕಾರಿಯಪ್ಪ ಎ.ಜಿ., ಸಿಇಎನ್ ಕ್ರೈಂ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಕೆ. ಆವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಸಿಇಎನ್ ಕ್ರೈಂ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಮಂಜುನಾಥ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶೇಖರ್ ಎಎಸ್ಐ, ಧರ್ಮಾ ನಾಯ್ಕ ಹೆಚ್‌ಸಿ, ಅವನಾಶ ಹೆಚ್‌ಸಿ, ನಾರಾಯಣ ಸ್ವಾಮಿ ಪಿಸಿ, ಪಿರ್ ದೊಸ್ ಅಹಮದ್ ಪಿಸಿ, ರವಿ ಬಿ ಪಿಸಿ, ಆಂಡ್ರ್ಯೂಸ್ ಜೊನ್ಸ್ ಪಿಸಿ, ಪ್ರಮೋದ್ ಎಲ್ ಬಿ ಪಿಸಿ ಮತ್ತು ಸಂಗಮೇಶ ಬಿ ಸಿಪಿಸಿ ತಂಡವು ಭಾಗಿಯಾಗಿತ್ತು.
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕಾರ್ತಿಕ್ ವಿ. ಅಲಿಯಾಸ್ ಸಾಪಡ್(21), ಎನ್. ರಾಜೇಶ್ ಅಲಿಯಾಸ್ ರಾಜು(24) ಅವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 1,70,000- ರೂಗಳ 5 ಕೆಜಿ 780 ಗ್ರಾಂ ತೂಕದ ಒಣ ಗಾಂಜಾ ಹಾಗೂ ಒಂದು ಬೈಕ್ ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.