ಹಾವೇರಿ: ಪತಿಗೆ ಸಾಲಗಾರರು ಕಿರುಕುಳ ನೀಡುತ್ತಿರುವುದನ್ನು ಕಂಡು ಮನನೊಂದ ಪತ್ನಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾವೇರಿ ಜಿಲ್ಲೆಯ ಕೋಟಿಹಾಳ ಗ್ರಾಮದಲ್ಲಿ ನಡೆದಿದೆ.
ತುಂಗಭದ್ರಾ ನದಿಗೆ ಹಾರಿದ್ದ ಮಹಿಳೆ ನದಿಯ ನಡು ನೀರಿನಲ್ಲಿ ಸಿಲುಕಿದ್ದರು. ಸದ್ಯ ಮಹಿಳೆಯನ್ನು ರಕ್ಷಿಸಲಾಗಿದೆ. ರೂಪಾ ಅಮ್ಲೇರ್ (40) ರಕ್ಷಿಸಲ್ಪಟ್ಟ ಮಹಿಳೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ರಟ್ಟಿಹಳ್ಳಿ ಮೂಲದವರು.
ಗಂಡನಿಗೆ ಸಾಲಗಾರರು ಕೊಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ರೂಪಾ, ನಿನ್ನೆ ರಾತ್ರಿ ತುಂಗಭದ್ರಾ ನದಿಗೆ ಹಾರಿದ್ದಾರೆ. ಆದರೆ ನಡು ನೀರಿನಲ್ಲಿ ಸಿಲುಕಿ ಪ್ರಾಣ ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ಇಂದು ಬೆಳಿಗ್ಗೆ ಗ್ರಾಮದ ಜಮೀನಿಗೆ ತೆರಳುತ್ತಿದ್ದ ರೈತರೊಬ್ಬರಿಗೆ ನದಿಯಲ್ಲಿ ಸಿಲುಕಿರುವ ಮಹಿಳೆ ಕಂಡಿದ್ದಾರೆ. ರಕ್ಷಣೆ ಮಾಡುವಂತೆ ಕೂಗಿಕೊಂಡಿದ್ದಾರೆ. ಈ ವೇಳೆ ರೈತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.