ರಾಯಚೂರು: ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆಂದು ತೆರಳಿದ್ದ ಮೂವರು ಸ್ನೇಹಿತರು ತುಂಗಭದ್ರಾನದಿಯಲ್ಲಿ ಈಜಲು ಹೋಗಿ ದುರಂತಕ್ಕೀಡಾಗಿರುವ ಘಟನೆ ನಡೆದಿದೆ.
ಭಾರಿ ಮಳೆಯಿಂದಾಗಿ ತುಂಗಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿತೀರಕ್ಕೆ ಹೋಗದಂತೆ ನಿರ್ಬಂಧ ವಿಧಿಸಿದ್ದರೂ ನಿರ್ಲಕ್ಷ ಮಾಡಿ ನಡಿಯಲ್ಲಿ ಈಜಲು ಹೋಗಿದ್ದ ಮೂವರು ನಿನ್ನೆ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದರು. ತೀವ್ರ ಶೋಧಕಾರ್ಯಾಚರಣೆ ಬಳಿಕ ಇಂದು ಮೂವರ ಮೃತದೇಹ ಪತ್ತೆಯಾಗಿದೆ.
ಹಾಸನ ಮೂಲದ ಅಜಿತ್ (20), ಸಚಿನ್ (20) ಹಾಗೂ ಪ್ರಮೋದ್ (19) ಮೃತ ದುರ್ದೈವಿಗಳು. ಆಂಧ್ರದ ಎಸ್ ಡಿಆರ್ ಎಫ್ ತಂಡ ನಡೆದಿದ ನಿರಂತರ ಶೋಧಕಾರ್ಯದ ಬಳಿಕ ನದಿಯಲ್ಲಿ ಮೂವರ ಶವ ಪತ್ತೆಯಾಗಿದೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನಿಸಲಾಗಿದೆ.