ತುಂಗಾ ಜಲಾಶಯದ ವ್ಯಾಪ್ತಿಯಲ್ಲಿ ನಾಳೆಯಿಂದ 1 ತಿಂಗಳು ನಿಷೇಧಾಜ್ಞೆ ಜಾರಿ

ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ತುಂಗಾ ಜಲಾಶಯದ ಸುತ್ತ-ಮುತ್ತ ಪ್ರದೇಶದ ವ್ಯಾಪ್ತಿಯಲ್ಲಿ ಆ. 3 ರಿಂದ ಸೆ. 2 ರವರೆಗೆ ಸಿ.ಆರ್.ಪಿ.ಸಿ. ಕಲಂ 144 ಅಡಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

ತುಂಗಾ ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಿದ್ದು, ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹೊರಬಿಡಲಾಗುತ್ತಿದೆ. ತುಂಗಾ ಜಲಾಶಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಬಾಗಿನ ಅರ್ಪಿಸಲು ಮುಖಂಡರು, ರೈತರು ಜಲಾಶಯ ವೀಕ್ಷಣೆಗೆ ಬರುತ್ತಿದ್ದು, ಜಲಾಶಯದ ಹಿತದೃಷ್ಟಿಯಿಂದ ಸುರಕ್ಷೆ ವಹಿಸುವುದು ಕಷ್ಟಸಾಧ್ಯವಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ, ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಆ. 3ರಿಂದ ಸೆ. 2ರವರೆಗೆ ಒಂದು ತಿಂಗಳ ಕಾಲ ತುಂಗಾ ಜಲಾಶಯದ ಪ್ರದೇಶದ ಸುತ್ತ-ಮುತ್ತಲು 500 ಮೀ ವ್ಯಾಪ್ತಿಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಕಲಂ 163 ರಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ.

ನಿಬಂಧನೆಗಳು:-

5 ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಿದೆ.

ತುಂಗಾ ನದಿಯಲ್ಲಿ ನೀರಿಗೆ ಇಳಿಯುವುದನ್ನು, ಪೋಟೋ ತೆಗೆಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.

ಜಲಾಶಯವು ಸಂರಕ್ಷಿತಾ ಪ್ರದೇಶವಾಗಿರುವುದರಿಂದ, ಸದರಿ ಗೇಟಿನಲ್ಲಿ ಗುಂಪುಗೂಡುವುದು, ಡ್ಯಾಂ ನ ಮೇಲೆ ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಜಲಾಶಯದ ಸೆಕ್ಯೂರಿಟಿ, ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಉಂಟು ಮಾಡುವಂತಿಲ್ಲ.

ಬಾಗಿನ ನೀಡಲು ಬರುವವರು ನೀರಿನಲ್ಲಿ ಇಳಿಯುವಂತಿಲ್ಲ ಹಾಗೂ ಈಜಾಡುವಂತಿಲ್ಲ.

ನಿಷೇಧಾಜ್ಞೆ ಸಮಯದಲ್ಲಿ ಆಯುಧ, ಶಸ್ತ್ರಾಸ್ತ್ರಗಳು ಮತ್ತು ಮಾರಕಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ನಿಷೇಧಿಸಿದೆ.

ಯಾವುದೇ ರೀತಿಯ ಸಾರ್ವಜನಿಕ ಅಸ್ತಿ-ಪಾಸ್ತಿಗಳಿಗೆ ಹಾನಿ ಉಂಟು ಮಾಡತಕ್ಕದ್ದಲ್ಲ.

ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.

ಸದರಿ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಭಾರತೀಯ ನ್ಯಾಯ ಸಂಹಿತೆ 2023, ಕಲಂ 223 ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read