ತುಮಕೂರು: ಎಣ್ಣೆ ಏಟಿನಲ್ಲಿ ಗೃಹ ರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ಓರ್ವರು ಮಹಿಳಾ ಸಿಬ್ಬಂದಿಯ ಜೊತೆಗೆ ಅನುಚಿತವಾಗಿ ವರ್ತಿಸಿರುವ ರೋಪ ಕೇಳಿಬಂದಿದೆ.
ತುಮಕೂರಿನ ಗೃಹ ರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ಆರ್.ರಾಜೇಂದ್ರನ್ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಟ್ರೈನಿಂಗ್ ಕ್ಯಾಂಪ್ ವೇಳೆ ಎಣ್ಣೆ ಏಟಿನಲ್ಲಿ ಮಹಿಳಾ ಸಿಬ್ಬಂದಿಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ನೊಂದ ಗೃಹ ರಕ್ಷಕಿ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಮಹಿಳಾ ಆಯೋಗ, ತುಮಕೂರು ಜಿಲ್ಲಾಧಿಕಾರಿ, ತುಮಕೂರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಕೆಲ ದಿನಗಳ ಹಿಂದೆ ತುಮಕೂರಿನ ಸಿದ್ದರಬೆಟ್ಟದಲ್ಲಿ ಗೃಹ ರಕ್ಷಕ ದಳ ಸಿಬ್ಬಂದಿಗೆ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಈ ವೇಳೆ ತರಬೇತಿಗೆ ಬಂದಿದ್ದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಇದನ್ನು ಅಲ್ಲಿದ್ದವರು ಮೇಲಧಿಕಾರಿಗಳಿಗೆ ತಿಳಿಸಿದ್ದರು. ಈ ವೇಳೆ ಮಹಿಳಾ ಸಿಬ್ಬಂದಿಗಳಿದ್ದರೂ ಅವರಿಗೆ ಪ್ರಥಮ ಚಿಕಿತ್ಸೆ ಮಾಡಲು ಬಿಡದೇ ತಾವೇ ಕುಡಿದ ಅಮಲಿನಲ್ಲಿ ಪ್ರಥಮ ಚಿಕಿತ್ಸೆ ಮಾಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಯ ಅಂಗಾಂಗ ಮುಟ್ಟಿದ್ದಲ್ಲದೇ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೇ ಮಾರನೆಯ ದಿನ ತರಬೇತಿ ವೇಳೆ ಕಾಲ್ನಡಿಗೆಯಲ್ಲಿ ಸಿದ್ದರಬೆಟ್ಟ ಹತ್ತುವಾಗ ಮತ್ತೋರ್ವ ಗೃಹ ರಕ್ಷಕಿ ಜೊತೆಗೂ ಇದೇ ರೀತಿ ಅಸಭ್ಯವಾಗಿ ವರ್ತಿಸಿದ್ದಾರೆ.
ಟ್ರೇನಿಂಗ್ ಕ್ಯಾಂಪ್ ವೇಳೆ ಡೆಪ್ಯೂಟಿ ಕಮಾಂಡೆಂಟ್ ಗಳಿಗೆ ಅತಿಥಿ ಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರೂ ರಾಜೇಂದ್ರನ್, ಮಹಿಳಾ ಸಿಬ್ಬಂದಿಗಳ ಕೊಠಡಿ ಬಳಿ ಇದ್ದ ಒಂದು ಕೊಠಡಿಯಲ್ಲಿಯೇ ಇರುತ್ತಿದ್ದರು. ದಿನ ರಾತ್ರಿ ಕೆಲ ಅಧಿಕಾರಿಗಳು ಸೇರಿ ಅವರ ಕೊಠಡಿಯಲ್ಲಿ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದರು.