ಉತ್ತರಾಖಂಡದ ಡೆಹ್ರಾದೂನ್‌ನಲ್ಲಿರುವ ರಿಸ್ಪಾನಾ ಸೇತುವೆಯ ಮೇಲೆ ಮಾವಿನಹಣ್ಣುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಬುಧವಾರ ಪಲ್ಟಿಯಾಗಿದೆ. ಈ ಘಟನೆ ರಸ್ತೆಯಲ್ಲಿ ಮಾವಿನಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಗೊಂದಲಮಯ ವಾತಾವರಣ ಸೃಷ್ಟಿಸಿದೆ. ಈ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂಬುದು ಸಮಾಧಾನಕರ ಸಂಗತಿ. ಆದರೆ, ಸೇತುವೆಯ ಮೇಲೆ ಚೆಲ್ಲಿದ್ದ ನೂರಾರು ಮಾವಿನಹಣ್ಣುಗಳು ಕೆಲವೇ ನಿಮಿಷಗಳಲ್ಲಿ ದಾರಿಹೋಕರು ಮತ್ತು ಸ್ಥಳೀಯರ ಗುಂಪನ್ನು ಆಕರ್ಷಿಸಿದವು. ವೈರಲ್ ವಿಡಿಯೋದಲ್ಲಿ ಜನರು ಚೀಲ, ಬುಟ್ಟಿಗಳು ಮತ್ತು ಗೋಣಿಚೀಲಗಳನ್ನು ಹಿಡಿದುಕೊಂಡು ಹಣ್ಣುಗಳನ್ನು ಸಂಗ್ರಹಿಸಲು ಮುಗಿಬಿದ್ದಿರುವುದು ಕಂಡುಬಂದಿದೆ. ಸೇತುವೆ ಕ್ಷಣಾರ್ಧದಲ್ಲಿ ಜನನಿಬಿಡ ಬೀದಿ ಮಾರುಕಟ್ಟೆಯಂತೆ ಕಾಣುತ್ತಿತ್ತು.
ʼಅನಾಗರಿಕʼ ವರ್ತನೆಗೆ ನೆಟ್ಟಿಗರ ಆಕ್ರೋಶ
ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರಾದ ಭೂಪಿ ಪನ್ವಾರ್, ವಿಡಿಯೋವನ್ನು ಹಂಚಿಕೊಂಡು, “ಡೆಹ್ರಾದೂನ್‌ನ ರಿಸ್ಪಾನಾ ಸೇತುವೆಯ ಮೇಲೆ ಮಾವಿನಹಣ್ಣುಗಳನ್ನು ತುಂಬಿದ ಲಾರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ, ಆದರೆ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿದ್ದ ರಸಭರಿತ ಮಾವಿನಹಣ್ಣುಗಳು ಕೆಲವರ ಗಮನ ಸೆಳೆದವು. ದುರಂತವನ್ನು ಅವಕಾಶವನ್ನಾಗಿ ಪರಿವರ್ತಿಸಿದ ಅನೇಕರು, ಉಚಿತ ಜಾತ್ರೆಯೇ ಏರ್ಪಟ್ಟಿದೆ ಎಂಬಂತೆ ಮಾವಿನಹಣ್ಣುಗಳನ್ನು ಕೊಂಡೊಯ್ಯಲು ಬುಟ್ಟಿಗಳು ಮತ್ತು ಚೀಲಗಳೊಂದಿಗೆ ಮುಗಿಬಿದ್ದರು!” ಎಂದು ಬರೆದಿದ್ದಾರೆ.
ಸ್ಥಳೀಯ ಸುದ್ದಿ ಸಂಸ್ಥೆ ಎಬಿಸಿ ನ್ಯೂಸ್ ಪ್ರಕಾರ, ಅಪಘಾತದಿಂದಾಗಿ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ಅಡ್ಡಿಯಾಗಿತ್ತು, ಆದರೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ತೆರವುಗೊಳಿಸಿ, ಸಂಚಾರವನ್ನು ಸುಗಮಗೊಳಿಸಿದರು.
ಇತ್ತೀಚೆಗೆ, ಆಂಧ್ರಪ್ರದೇಶದಲ್ಲಿ ಮಾವಿನಹಣ್ಣು ತುಂಬಿದ ಲಾರಿಯೊಂದು ಪಲ್ಟಿಯಾಗಿ ಒಂಬತ್ತು ಕಾರ್ಮಿಕರು ಸಾವನ್ನಪ್ಪಿ, ಹತ್ತು ಮಂದಿ ಗಾಯಗೊಂಡಿದ್ದರು. ಈ ದುರಂತ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿತ್ತು. ವರದಿಗಳ ಪ್ರಕಾರ, ಮೃತಪಟ್ಟ ಸಂತ್ರಸ್ತರು ಮಾವಿನಹಣ್ಣುಗಳ ಲೋಡ್ ಮೇಲೆ ಕುಳಿತಿದ್ದರು ಮತ್ತು ವಾಹನ ಪಲ್ಟಿಯಾದಾಗ ಸಿಲುಕಿ ಸಾವನ್ನಪ್ಪಿದ್ದಾರೆ.
देहरादून के रिस्पना पुल पर एक आम से लदा ट्रक पलट गया। हादसे में किसी को चोट नहीं आई, मगर सड़क पर बिखरे रसीले आमों ने कुछ लोगों की आँखें चमका दीं। आपदा को अवसर बनाते हुए, कई लोग टोकरी-थैले लेकर आम लूटने में जुट गए, मानो मुफ्त का मेला लग गया हो! pic.twitter.com/NTqz8n4DpR
— bhUpi Panwar (@askbhupi) July 16, 2025